ಬೆಂಗಳೂರು, ಜ.27(ಕೆಎಂಶಿ)- ಹೊಸ ನಿಯಮಗಳ ಅಡಿಯಲ್ಲೇ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 27 ಮತ್ತು 28ರಂದು ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಅಕ್ರಮ ಗಣಿಗಾರಿಕೆಯನ್ನು ಕಾನೂ ನಿನ ವ್ಯಾಪ್ತಿಯಲ್ಲಿ ಸಕ್ರಮಗೊಳಿಸಲು ಹೊಸ ನಿಯಮಗಳನ್ನು ಜಾರಿ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು. ಹಾಲಿ ಇರುವ ಕಾಯ್ದೆಗೂ ತಿದ್ದುಪಡಿ ಮಾಡಿ ರಾಜ್ಯದಲ್ಲಿ ಹೊಸದಾಗಿ ಗಣಿ ಕಾಯ್ದೆ ಜಾರಿ ಮಾಡಲಾಗುವುದು ಈ ಸಂಬಂಧ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟ ಪಡಿಸಿದರು. ಕರ್ನಾಟಕದಲ್ಲಿ ಮಾತ್ರ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿಲ್ಲ. ದೇಶಾದ್ಯಂತ ಇದು ನಡೆಯುತ್ತಲೇ ಇದೆ.ಇದನ್ನು ಯಾವ ರೀತಿ ತಡೆಗಟ್ಟಬೇಕು ಎಂಬುದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರ ಸೂಕ್ತವಾದ ನಿರ್ಧಾರವನ್ನು ತೆಗೆದು ಕೊಳ್ಳಲಿದೆ ಎಂದರು. ಬೇರೆ ಬೇರೆ ರಾಜ್ಯಗಳಲ್ಲಿ ಯಾವ ರೀತಿ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಕಾಯ್ದೆಯನ್ನು ಜಾರಿ ಮಾಡಿದ್ದಾರೆ ಎಂಬುದರ ಬಗ್ಗೆಯೂ ನಾವು ಅಧ್ಯಯನ ನಡೆಸು ತ್ತಿದ್ದೇವೆ. ಗಣಿಗಾರಿಕೆ ನಡೆಸುವುದು ತಪ್ಪಲ್ಲ. ಆದರೆ, ಅಕ್ರಮವಾಗಿ ಇಲ್ಲವೇ ಕಾನೂನಿಗೆ ವಿರುದ್ಧವಾಗಿ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಅಭಿವೃದ್ಧಿಗಾಗಿ ಗಣಿಗಾರಿಕೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸದ ಹಾಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದರು.