ಪಾಲಿಕೆ ಸೇರ್ಪಡೆ ಮುಂದೂಡಿ ಗ್ರಾಪಂ ಚುನಾವಣೆ ನಡೆಸಿ: ಹಿನಕಲ್ ಗ್ರಾಪಂ ಮಾಜಿ ಉಪಾಧ್ಯಕ್ಷ ಒತ್ತಾಯ
ಮೈಸೂರು

ಪಾಲಿಕೆ ಸೇರ್ಪಡೆ ಮುಂದೂಡಿ ಗ್ರಾಪಂ ಚುನಾವಣೆ ನಡೆಸಿ: ಹಿನಕಲ್ ಗ್ರಾಪಂ ಮಾಜಿ ಉಪಾಧ್ಯಕ್ಷ ಒತ್ತಾಯ

November 4, 2020

ಮೈಸೂರು, ನ.3(ಆರ್‍ಕೆಬಿ)- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹಿನಕಲ್ ಗ್ರಾಮ ಸೇರ್ಪಡೆಗೆ ನಮ್ಮ ವಿರೋಧ ವಿಲ್ಲ. ಆದರೆ ಈಗ ಅದಕ್ಕೆ ಸೂಕ್ತ ಸಮಯ ವಲ್ಲ. ಏಕೆಂದರೆ ಪಾಲಿಕೆ ಚುನಾವಣೆ ಇನ್ನೂ 3 ವರ್ಷಗಳಿಗೂ ಹೆಚ್ಚು ಸಮಯವಿದೆ. ಈಗಲೇ ಪಾಲಿಕೆ ವ್ಯಾಪ್ತಿಗೆ ಸೇರಿಸಿಬಿಟ್ಟರೆ ಇತ್ತ ಗ್ರಾಮ ಪಂಚಾಯಿತಿಗೂ ಒಳಪಡದೆ, ಅತ್ತ ಸಂಪೂರ್ಣ ಪಾಲಿಕೆಗೂ ಸೇರ್ಪಡೆ ಗೊಳ್ಳದೇ ಅತಂತ್ರವಾಗುವ ಆತಂಕವಿದೆ. ಹೀಗಾಗಿ ಹಿನಕಲ್ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಸಬೇಕು ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಎಸ್.ಹೊನ್ನಪ್ಪ ಮತ್ತಿ ತರರು ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ವರ್ತುಲ ರಸ್ತೆಯ ಒಳಗಿರುವ ಚಾಮುಂಡಿಬೆಟ್ಟ, ಆಲನಹಳ್ಳಿ, ಶ್ರೀರಾಂಪುರ, ಹಿನಕಲ್ ಗ್ರಾಮಗಳನ್ನು ಪಾಲಿಕೆಗೆ ಸೇರ್ಪಡೆ ಮಾಡುವ ವಿಚಾರ ಈಗ ಚರ್ಚೆಯಲ್ಲಿದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ಸಂಸದ ಪ್ರತಾಪಸಿಂಹ ಅವರೂ ಉತ್ಸುಕರಾಗಿದ್ದಾರೆ. ಹಿಂದೆ ಸಿದ್ದ ರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಗ್ರಾಮವನ್ನು ಪಾಲಿಕೆಗೆ ಸೇರ್ಪಡೆ ಮಾಡು ವಂತೆ ಕೋರಿದ್ದೆವು. ಆಗ ಶಾಸಕ ಜಿ.ಟಿ. ದೇವೇಗೌಡರು ಪಾಲಿಕೆಗೆ ಸೇರ್ಪಡೆ ಮಾಡಿಕೊಳ್ಳುವ ಮುನ್ನ ಸರ್ಕಾರ ಈ ಗ್ರಾಮಗಳ ಅಭಿವೃದ್ಧಿಗೆ ಹಣ ಮೀಸಲಿಟ್ಟು, ನಂತರ ಸೇರ್ಪಡೆ ಮಾಡಲಿ ಎಂದು ಸಲಹೆ ನೀಡಿದ್ದರು. ಈಗ ಈ ಪ್ರಸ್ತಾವನೆಗೆ ಮತ್ತೆ ಚಾಲನೆ ದೊರೆತಿರುವುದು ಸಂತಸದ ವಿಷಯ. ಈ ಬಗ್ಗೆ ಸರ್ಕಾರ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಹಣ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಆರು ತಿಂಗಳ ಹಿಂದೆ ಸರ್ಕಾರ ಗ್ರಾಪಂಗೆ ಆಡಳಿತಾಧಿಕಾರಿ ನೇಮಿಸಿದೆ. ಜನಪ್ರತಿನಿಧಿ ಗಳಿಲ್ಲದೆ ಯಾವುದೇ ಕೆಲಸ ಆಗುತ್ತಿಲ್ಲ. ಚುನಾ ವಣೆ ನಡೆಸದೆ ಸ್ಥಳೀಯ ಸಂಸ್ಥೆಯನ್ನು 3 ವರ್ಷ 6 ತಿಂಗಳವರೆಗೆ ಅಮಾನತ್ತಿನಲ್ಲಿ ಡುವುದು ಕಾನೂನು ಬಾಹಿರ. ಆದ್ದರಿಂದ ಮುಂದಿನ ಪಾಲಿಕೆ ಚುನಾವಣೆವರೆಗೆ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಯಲು ಸಹಕರಿಸಿ ಎಂದರು. ಪಾಲಿಕೆ ಚುನಾವಣೆ ವೇಳೆ ಗ್ರಾಮಗಳನ್ನು ಪಾಲಿಕೆ ಆಡಳಿತಕ್ಕೆ ಸೇರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ಹಿನಕಲ್ ಗ್ರಾಪಂ ಮಾಜಿ ಸದಸ್ಯ ಕೆ.ಜಿ.ನಾಗರಾಜು, ಮಹದೇವ, ರಮೇಶ್ ಹೊಟೆಗೌಡ, ಮುಖಂಡರಾದ ಪಿ.ರಾಜಣ್ಣ, ಸೋಮು ಉಪಸ್ಥಿತರಿದ್ದರು.

 

Translate »