ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿದ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ
ಮೈಸೂರು

ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿದ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ

July 25, 2019

ಮೈಸೂರು,ಜು.24(ಎಂಟಿವೈ)- ಅಪಾರ ಸಂಖ್ಯೆಯ ಭಕ್ತರ ಮುಗಿಲು ಮುಟ್ಟಿದ ಜಯಘೋಷ, ಮಂಗಳವಾದ್ಯದ ನಿನಾದ, ಪೊಲೀಸ್ ಬ್ಯಾಂಡ್ ಹಿಮ್ಮೇಳ ದೊಂದಿಗೆ ಬುಧವಾರ ಚಾಮುಂಡಿಬೆಟ್ಟದಲ್ಲಿ ನಾಡದೇವಿ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವ ವೈಭವದಿಂದ ಜರುಗಿತು.

ಆಷಾಢ ಮಾಸದ ಕೃಷ್ಣ ಪಕ್ಷದ ಸಪ್ತಮಿ ರೇವತಿ ನಕ್ಷತ್ರದ ದಿನ ಚಾಮುಂಡಿಬೆಟ್ಟ ಸೇರಿದಂತೆ ಎಲ್ಲೆಡೆ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವ ಆಚರಿಸುವ ಪದ್ಧತಿ ಆಚರಣೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಇಂದು ಚಾಮುಂಡಿಬೆಟ್ಟದ ದೇವಾಲಯ ದಲ್ಲಿ ಮುಂಜಾನೆ 5.30ರಿಂದ ಪ್ರಧಾನ ಆಗಮಿಕ ಡಾ.ಎನ್.ಶಶಿಶೇಖರ್ ದೀಕ್ಷಿತ್, ಅರ್ಚಕ ದೇವಿ ಪ್ರಸಾದ್ ನೇತೃತ್ವದಲ್ಲಿ ದೇವಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿ ಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾ ಮಾರ್ಚನೆ ಹಾಗೂ ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಿದವು. ಎಲ್ಲಾ ಪೂಜಾ ಕೈಂಕರ್ಯ ಪೂರ್ಣಗೊಂಡ ಬಳಿಕ ಮಂಗಳಾರತಿ ಬೆಳಗಿ ಬೆಳಿಗ್ಗೆ 8 ಗಂಟೆಯಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಯಿತು. ಬೆಳಿಗ್ಗೆ 9.30ಕ್ಕೆ ಮಹಾ ಮಂಗಳಾರತಿ ಬೆಳಗಿದ ನಂತರ ಉತ್ಸವ ಮೂರ್ತಿಯನ್ನು ದೇವಾಲಯದ ಮುಂಭಾಗಕ್ಕೆ ತಂದು ಅರಮನೆಯಿಂದ ತರಲಾಗಿದ್ದ ಚಿನ್ನದ ಪಲ್ಲಕ್ಕಿಯಲ್ಲಿಟ್ಟು ಪೂಜಿಸಲಾಯಿತು.

ಬೆಳಿಗ್ಗೆ 10.30ಕ್ಕೆ ರಾಜವಂಶಸ್ಥ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ದಂಪತಿ ಚಿನ್ನದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಪೊಲೀಸ್ ಬ್ಯಾಂಡ್ ವಾದನ, ಮಂಗಳವಾದ್ಯ, ಅರಮನೆಯ ಬಿರುದು ಬಾವಲಿ, ಛತ್ರಿ, ಚಾಮರಗಳೊಂದಿಗೆ ದೇವಾಲಯದ ಸುತ್ತಲೂ ಪಲ್ಲಕ್ಕಿ ಉತ್ಸವದಲ್ಲಿ ಚಾಮುಂಡೇ ಶ್ವರಿ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ನಡೆದ ಮೆರವಣಿಯ ರಸ್ತೆಯುದ್ದಕ್ಕೂ ಎರಡು ಬದಿಯಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಶಕ್ತಿದೇವಿಯನ್ನು ಕಣ್ತುಂಬಿಕೊಂಡರು. ಮುಗಿಲು ಮುಟ್ಟುವಂತೆ ಜಯಘೋಷ ಹಾಕುವ ಮೂಲಕ ಭಕ್ತಿ ಪ್ರದರ್ಶಿಸಿದರು. ಬಳಿಕ ರಾತ್ರಿ 8.30ಕ್ಕೆ ಚಾಮುಂಡೇಶ್ವರಿ ಅಮ್ಮನವರ ಉತ್ಸವ, ಫಲ ಪೂಜೆ, ದರ್ಬಾ ರೋತ್ಸವ ಹಾಗೂ ಮಂಟಪೋತ್ಸವ ನೆರವೇರಿತು. ರಾತ್ರಿ 10 ಗಂಟೆವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಕಣ್ಮನ ಸೆಳೆದ ಅಲಂಕಾರ : ವರ್ಧಂತಿ ಮಹೋತ್ಸವ ಹಿನ್ನೆಲೆಯಲ್ಲಿ ಚಾಮುಂಡೇ ಶ್ವರಿ ದೇವಾಲಯವನ್ನು ಬಣ್ಣ ಬಣ್ಣದ ಹೂವು ಗಳಿಂದ ಅಲಂಕರಿಸಲಾಗಿತ್ತು. ದೇವಾ ಲಯದ ಪ್ರವೇಶದ್ವಾರದಿಂದ ಗರುಡ ಕಂಬದವರೆಗೂ ಹೂವಿನ ತೋರಣ ಭಕ್ತರ ಕಣ್ಮನ ಸೆಳೆಯಿತು. ಗರುಡ ಕಂಬದ ಸುತ್ತಲೂ ಇರುವ ಪ್ರಾಂಗಣದ ಕಂಬಗಳಿಗೆ ಕಬ್ಬಿನ ಜಲ್ಲೆಯಿಂದ ಅಲಂಕಾರ ಮಾಡಲಾಗಿತ್ತು. ಗರ್ಭಗುಡಿ ಮುಂದಿನ ಪ್ರಾಂಗಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಭಕ್ತರಿಂದಲೇ ಸಿಹಿ ವಿತರಣೆ: ದೇವಾ ಲಯದ ಸುತ್ತ, ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಭಕ್ತರು ಲಾಡು, ಮೈಸೂರು ಪಾಕ್, ಬಾದುಷ, ಜಹಂಗೀರ್, ಜಿಲೇಬಿ, ಪೇಡ ಸೇರಿದಂತೆ ವಿವಿಧ ಸಿಹಿ ತಿನಿಸನ್ನು ಭಕ್ತರಿಗೆ ಹಂಚಿ ಸಂಭ್ರಮಿಸಿದರು. ಸಿಹಿಯನ್ನು ಬಾಕ್ಸ್‍ಗಳಲ್ಲಿ ತುಂಬಿಕೊಂಡು ಬಂದಿದ್ದರು. ದಾಸೋಹ ಭವನದ ಬಳಿ ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ 25 ಸಾವಿರ ಲಾಡು ಹಂಚಲಾಯಿತು. ಮೈಸೂರು ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಟಿ.ಡಿ.ಪ್ರಕಾಶ್, ಕಡಕೊಳ ಜಗದೀಶ್, ಬಿಜೆಪಿ ಮುಖಂಡರಾದ ವಿಕ್ರಮ್ ಅಯ್ಯಂಗಾರ್, ನಾಗಶ್ರೀ, ಸುಚೀಂದ್ರ, ಜಯಸಿಂಹ, ಶ್ರೀಧರ್ ಮತ್ತಿತರರು ಲಾಡು ವಿತರಿಸಿದರು.

 

Translate »