ನೂತನ ಸರ್ಕಾರ ರಚನೆಗೆ ಬಿಜೆಪಿ ವರಿಷ್ಠರ ಮೀನಾಮೇಷ
ಮೈಸೂರು

ನೂತನ ಸರ್ಕಾರ ರಚನೆಗೆ ಬಿಜೆಪಿ ವರಿಷ್ಠರ ಮೀನಾಮೇಷ

July 25, 2019

ಬೆಂಗಳೂರು, ಜು. 24(ಕೆಎಂಶಿ)- ಸಮ್ಮಿಶ್ರ ಸರ್ಕಾರ ಉರುಳಿಸಿದ ಸಂಭ್ರಮದಲ್ಲಿದ್ದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ರಾಜ್ಯ ಪಾಲರ ಭೇಟಿ ಮಾಡಲು ರಾಷ್ಟ್ರೀಯ ಬಿಜೆಪಿ ಅನುಮತಿ ದೊರೆತಿಲ್ಲ. ಅಷ್ಟೇ ಅಲ್ಲ ಬಿಜೆಪಿ ಶಾಸಕಾಂಗ ಸಭೆ ಕರೆಯಲು ಅನುಮತಿ ನೀಡದ ವರಿಷ್ಠರು ಇಂದು ತಡರಾತ್ರಿ ವೇಳೆಗೆ ವೀಕ್ಷಕರನ್ನು ಕಳುಹಿಸುವ ನಿರ್ಧಾರ ಕೈಗೊಳ್ಳ ಲಿದ್ದಾರೆ. ವೀಕ್ಷಕರ ಆಗಮನದ ನಂತರವೇ ಶಾಸಕಾಂಗ ಸಭೆ ನಡೆದು, ನಾಯಕನ ಆಯ್ಕೆ ಜೊತೆಗೆ ರಾಜ್ಯಪಾಲರ ಭೇಟಿ ಮಾಡಿ, ಸರ್ಕಾರ ರಚನೆಗೆ ಕೋರಲಿದೆ. ಆದರೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ದುಡುಕಬೇಡಿ ಎಂದು ಯಡಿಯೂರಪ್ಪ ಅವರಿಗೆ ಕಿವಿಮಾತು ಹೇಳಿರುವುದಲ್ಲದೆ, ಮೊದಲು ಆರ್‍ಎಸ್‍ಎಸ್ ನಾಯಕರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿ. ಕಾಂಗ್ರೆಸ್-ಜೆಡಿಎಸ್‍ನಿಂದ ರಾಜೀನಾಮೆ ನೀಡಿ,ಹೊರ ಬಂದಿರುವ ಶಾಸಕರ ರಾಜೀನಾಮೆ ಇತ್ಯರ್ಥವಾಗಬೇಕು. ಒಂದೆರಡು ದಿನ ಸಭಾಧ್ಯಕ್ಷರ ನಿರ್ಧಾರ ಕಾದು ನೋಡೋಣ. ಸಭಾಧ್ಯಕ್ಷರ ನಿರ್ಧಾರ ಮತ್ತು ಸುಪ್ರೀಂಕೋರ್ಟ್ ನಿಲುವನ್ನು ಗಮನದಲ್ಲಿಟ್ಟುಕೊಂಡು ನಾವು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಅಲ್ಲಿಯವರೆಗೂ ತಾಳ್ಮೆಯಿಂದ ಇರಿ ಎಂದಿದ್ದಾರೆ.

ರಾಷ್ಟ್ರೀಯ ಅಧ್ಯಕ್ಷರ ಸಲಹೆ ಮೇರೆಗೆ ಚಾಮರಾಜಪೇಟೆಯ ಆರ್‍ಎಸ್‍ಎಸ್ ಕಚೇರಿಗೆ ತೆರಳಿದ ಯಡಿಯೂರಪ್ಪ ಅಲ್ಲಿನ ಮುಖ್ಯಸ್ಥರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿ, ಹೊರ ಬಂದು ತಕ್ಷಣವೇ ಪಕ್ಷದ ಹಿರಿಯ ನಾಯಕ ಅಶೋಕ್ ಅವರನ್ನು ದೆಹಲಿಗೆ ಕಳುಹಿಸಿದರು. ದೆಹಲಿಗೆ ತೆರಳಿರುವ ಅಶೋಕ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನು ಭೇಟಿ ಮಾಡಿ, ಚರ್ಚೆ ಮಾಡಲಿದ್ದಾರೆ. ನಂತರ ಅಗತ್ಯ ಬಂದರೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ, ಹಿಂತಿರುಗಲಿದ್ದಾರೆ.

ಈ ಮಧ್ಯೆ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಇಡೀ ದಿನ ಕಚೇರಿಯಲ್ಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನೀಡಿರುವ ದೂರುಗಳ ಬಗ್ಗೆ ಪರಿಶೀಲನೆ ಮತ್ತು ಕಾನೂನು ತಜ್ಞರೊಟ್ಟಿಗೆ ಸಮಾಲೋಚನೆ ನಡೆಸಿದರು. ಒಂದೆಡೆ ಕಾಂಗ್ರೆಸ್‍ನ ಹಿರಿಯ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಸಭಾಧ್ಯಕ್ಷರನ್ನು ಭೇಟಿ ಮಾಡಿ, ಪಕ್ಷದ ವಿರುದ್ಧ ಮತ ಹಾಕಿರುವ ನಮ್ಮ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದ್ದಲ್ಲದೆ, ಅದಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಒದಗಿಸಿದ್ದಾರೆ. ಕಾಂಗ್ರೆಸ್ ನಾಯಕರು ಹೊರ ಬರುತ್ತಿದ್ದಂತೆ ಬಿಜೆಪಿ ಮುಖಂಡರಾದ ಮಾಧುಸ್ವಾಮಿ ಹಾಗೂ ಬೊಮ್ಮಾಯಿ ಅವರು ಸಭಾಧ್ಯಕ್ಷರನ್ನು ಭೇಟಿ ಮಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಮನವಿ ಮಾಡಿಕೊಂಡರು.

ಯಡಿಯೂರಪ್ಪ ನಾಳೆಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸಿದ್ದರು. ಇಂದೇ ಶಾಸಕಾಂಗ ಸಭೆ ನಡೆಸಿ, ರಾಜ್ಯಪಾಲರಿಗೆ ಪತ್ರ ನೀಡುವ ನಿರ್ಧಾರ ಕೈಗೊಂಡಿದ್ದರು. ಆದರೆ ಪಕ್ಷದ ವರಿಷ್ಠರು ಇವರ ಆತುರಕ್ಕೆ ತಡೆ ನೀಡಿರುವುದಲ್ಲದೆ, ನಾವು ಆದೇಶ ನೀಡುವವರೆಗೂ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂದು ಸಲಹೆ ನೀಡುವುದರ ಮೂಲಕ ಪೂರ್ಣ ಹಿಡಿತವನ್ನು ವರಿಷ್ಠರು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ವರಿಷ್ಠರ ಸಲಹೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಇನ್ನೂ ಎರಡು ಮೂರು ದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ವಿಳಂಬವಾಗಬಹುದು. ಯಡಿಯೂರಪ್ಪ ಎಂದು ಮುಖ್ಯಮಂತ್ರಿಯಾಗುತ್ತಾರೋ ಎಂಬುದು ತಿಳಿಯದು. ಆದರೆ ಅಧಿಕಾರ ಕಳೆದುಕೊಂಡು ಹಂಗಾಮಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹೆಚ್.ಡಿ. ಕುಮಾರಸ್ವಾಮಿ ಇಂದು ಪಕ್ಷದ ಶಾಸಕರ ಜೊತೆ ಸಭೆ ನಡೆಸಿದರು.

Translate »