ಹುಣಸೂರು,ಮೇ 3(ಕೆಕೆ)-ಬೆಳೆ ರಜೆ ಕುರಿತು ಯಾವುದೇ ರೀತಿಯ ಗೊಂದಲಕ್ಕೀಡಾಗದೆ ನಿಶ್ಚಿಂತೆಯಿಂದ ತಂಬಾಕು ಬೆಳೆಯುವಂತೆ ರೈತರಿಗೆ ಸಂಸದ ಪ್ರತಾಪ್ ಸಿಂಹ ಧೈರ್ಯ ತುಂಬಿದರು.
ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಮಂಡಳಿಯಲ್ಲಿ ತಂಬಾಕು ಬೆಳೆಗಾರರಿಗೆ 2020-21ನೇ ಸಾಲಿನ ರಸಗೊಬ್ಬರ ವಿತರಿಸಿ ಮಾತನಾಡಿದ ಅವರು, ಲಾಕ್‍ಡೌನ್‍ನಿಂದ ಒಂದೂವರೇ ತಿಂಗಳಿಂದ ರೈತರಲ್ಲಿ ತಂಬಾಕು ಬೆಳೆಯುವ ಬಗ್ಗೆ ಗೊಂದಲವಿತ್ತು. ಈ ವಿಚಾರದ ಬಗ್ಗೆ ತಂಬಾಕು ಖರೀದಿದಾರರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದು, 99 ಮಿಲಿಯನ್ ಮಾರಾಟದ ಬದಲು 88 ಮಿಲಿಯನ್ ತಂಬಾಕು ಮಾರಾಟಕ್ಕೆ ಅನುಮತಿ ಪಡೆಯಲಾಗಿದೆ. ರೈತರೂ ಈ ತೀರ್ಮಾನ ಒಪ್ಪಿ ತಂಬಾಕು ಬೆಳೆಯಮು ಮುಂದಾಗಿದ್ದಾರೆ ಎಂದು ತಿಳಿಸಿದರು.
ಕಳೆದ ಬಾರಿ ಕೆಳ ದರ್ಜೆಯ ತಂಬಾಕು ಹೆಚ್ಚು ಉತ್ಪಾದನೆಯಾಗಿ ತೊಂದರೆ ಅನುಭವಿಸಿದ್ದೀರಿ. ಈ ಬಾರಿ ಕಡಿಮೆ ಭೂಮಿಯಲ್ಲಿ ಉತ್ತಮ ತಂಬಾಕು ಬೆಳೆಯಿರಿ. ಸುಸ್ಥಿರ ಮಾರುಕಟ್ಟೆ ಒದಗಿಸಲು ಸೂಕ್ತ ಕ್ರಮ ಕೈ ಗೊಳ್ಳುತ್ತೇನೆ ಎಂದು ಸಂಸದರು ರೈತರಿಗೆ ಭರವಸೆ ನೀಡಿದರು.
4 ವರ್ಷದಿಂದ ತಂಬಾಕು ಸಸಿಗಳ ನಾಟಿಗೂ ಮುನ್ನ ರಸಗೊಬ್ಬರ ಕೊಡಿಸುತ್ತಿದ್ದೇನೆ. ಕಳೆದ ವರ್ಷ ಸಿಂಗಲ್ ಬ್ಯಾರನ್ ಲೈಸೆನ್ಸ್‍ಗೆ ತಂಬಾಕು ಮಂಡಳಿಯಿಂದ 19,500 ರೂ. ಪ್ರೋತ್ಸಾಹ ಧನ ನೀಡಲಾಗಿತ್ತು. ಆದರೆ ಈ ಬಾರಿ 18 ಸಾವಿರ ರೂ. ಲಭಿಸುತ್ತಿದೆ. ರೈತರು ಸಾಮಾಜಿಕ ಅಂತರ ಕಾಪಾಡಿಕೊಂಡು ಗೊಬ್ಬರ ಪಡೆದು ಬೇಸಾಯಕ್ಕೆ ಮುಂದಾಗಬೇಕು ಎಂದ ಸಂಸದರು, ಲೈಸೆನ್ಸ್ ನವೀಕರಿಸಿಕೊಳ್ಳುವಂತೆ ಮನವಿ ಮಾಡಿದರು.
ತಂಬಾಕು ಬೇಸಾಯ, ಹರಾಜು ಕುರಿತು ಜೆಡಿಎಸ್ ಹಾಗೂ ಕಾಂಗ್ರೆಸ್‍ನವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಲು ಅವರಿಗೆ ನೈತಿಕ ಹಕ್ಕಿಲ್ಲ. ತಂಬಾಕು ಬೆಳೆ ಸಮಸ್ಯೆ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಪರ ಕೆಲಸ ಮಾಡುತ್ತಿವೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ್, ಹರಾಜು ಅಧೀಕ್ಷಕ ವಿರಭದ್ರಯ್ಯ, ದಿನೇಶ್, ಐಟಿಸಿ ಕಂಪನಿಯ ಲೀಫ್ ಮ್ಯಾನೇಜರ್ ಶ್ರೀನಿವಾಸ ರೆಡ್ಡಿ, ಮಾರ್ಕೆಟಿಂಗ್ ಮ್ಯಾನೇಜರ್ ಪೂರ್ಣೆಶ್, ಬಿಜೆಪಿ ತಾಲೂಕು ಅಧ್ಯಕ್ಷ ನಾಗಣ್ಣ, ರೈತ ಮುಖಂಡರಾದ ಮರೂರು ಚಂದ್ರಣ್ಣ, ಜಗದೀಶ, ರವಿಗೌಡ, ರಾಮೇಗೌಡ, ಸತೀಶ ಇದ್ದರು.