ಮೈಸೂರು, ಜೂ.25(ಪಿಎಂ)- ಬಾಕಿ ವೇತನ ಪಾವತಿ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ವಿಶೇಷ ಆರ್ಥಿಕ ನೆರವಿನ ಪ್ಯಾಕೇಜ್‍ಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಶಿಕ್ಷಕರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕರ ಹೋರಾಟ ಸಮಿತಿ, ಆಲ್ ಇಂಡಿಯಾ ಡೆಮಾ ಕ್ರೆಟಿಕ್ ಯೂತ್ ಆರ್ಗ್‍ನೈಸೇಷನ್ (ಎಐಡಿವೈಓ) ಆಶ್ರಯ ದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪ ನ್ಯಾಸಕರು ಹಾಗೂ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ದುಡಿಯುವ ನಮಗೆ ಸೇವಾ ಭದ್ರತೆ ಇಲ್ಲ. 25 ವರ್ಷಗಳಿಂ ದಲೂ `ಅತಿಥಿ’ಯಾಗಿಯೇ ಕಡಿಮೆ ಗೌರವಧನಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರನ್ನು ಮುಂದುವರೆಸದಿರುವ ಚಿಂತನೆಯಲ್ಲಿದೆ ಎನ್ನ ಲಾಗಿದೆ. ಇದು ಗಾಯದ ಮೇಲೆ ಬರೆ ಎಳೆದಂತೆ. ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರನ್ನು ಖಾಯಂಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಲಾಕ್‍ಡೌನ್‍ನಿಂದಾಗಿ ಮಾ.24ರಿಂದಲೂ ಗೌರವಧನ ನೀಡಿಲ್ಲ. ಖಾಲಿ ಹುದ್ದೆಗಳಿಗೆ ಖಾಯಂ ನೇಮಕ ಮಾಡದೇ `ಅತಿಥಿ’ ಹೆಸರಿನಲ್ಲಿ ಶೋಷಣೆ ಮಾಡಲಾಗುತ್ತಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಪ್ರತಿ ಬೋಧನಾ ಅವಧಿಗೆ 1,500 ರೂ. ಅಥವಾ ಮಾಸಿಕ 50 ಸಾವಿರ ರೂ. ವೇತನ ನಿಗದಿ ಮಾಡಬೇಕೆಂದು 2019ರ ಜನವರಿಯಲ್ಲಿ ಯುಜಿಸಿ ಸುತ್ತೋಲೆ ಹೊರಡಿಸಿದೆ. ಆದರೆ ಇಂದಿಗೂ ಜಾರಿಗೆ ಬಂದಿಲ್ಲ. ನೆಟ್, ಸೆಟ್ ಅಥವಾ ಪಿಹೆಚ್‍ಡಿ ಆದವರಿಗೆ ಮಾಸಿಕ 13 ಸಾವಿರ ರೂ., ಉಳಿದವರಿಗೆ 11 ಸಾವಿರ ಹಾಗೂ ಅತಿಥಿ ಶಿಕ್ಷಕರಿಗೆ ಮಾಸಿಕ 7,500 ರೂ. ಗೌರವಧನ ನೀಡಲಾಗುತ್ತಿದೆ. ನಮ್ಮ ಬದುಕೇ ಅತಂತ್ರವಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.
ಇತ್ತೀಚೆಗೆ ಮಳವಳ್ಳಿಯ ಸರ್ಕಾರಿ ಪದವಿ ಕಾಲೇಜಿನ ಇಬ್ಬರು ಅತಿಥಿ ಉಪನ್ಯಾಸಕರು ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡರು. ರಾಯಚೂರಿನ ಅತಿಥಿ ಉಪನ್ಯಾಸಕರೊಬ್ಬರು ಎರಡೂ ಕಿಡ್ನಿ ವೈಫಲ್ಯಕ್ಕೊಳ ಗಾಗಿದ್ದು, ಅವರ ಕುಟುಂಬ ತೀವ್ರ ಕಷ್ಟದಲ್ಲಿದೆ. ಇವು ಉದಾಹರಣೆ ಮಾತ್ರ. ಸಕಾಲಕ್ಕೆ ಗೌರವಧನ ನೀಡುತ್ತಿಲ್ಲ. ಇದರಿಂದಲೂ ಹಲವು ಸಮಸ್ಯೆಗಳನ್ನು ಎದುರಿಸು ವಂತಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಎಐಡಿವೈಓ ರಾಜ್ಯಾಧ್ಯಕ್ಷೆ ಎಂ.ಉಮಾದೇವಿ, ಜಿಲ್ಲಾ ಸಮಿತಿ ಅಧ್ಯಕ್ಷ ಎಸ್.ಹೆಚ್.ಹರೀಶ್, ಕಾರ್ಯದರ್ಶಿ ಟಿ.ಆರ್.ಸುನಿಲ್, ಅತಿಥಿ ಉಪನ್ಯಾಸಕರಾದ ರಾಮಣ್ಣ, ಮಹದೇವಯ್ಯ, ರವೀಂದ್ರ, ಹನುಮಂತೇಶ್, ಕಲಾವತಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.