ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಇಂದಿನಿಂದ ಗುಜರಾತ್ ಕರಕುಶಲ ಉತ್ಸವ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಇಂದಿನಿಂದ ಗುಜರಾತ್ ಕರಕುಶಲ ಉತ್ಸವ

July 18, 2021

ಮೈಸೂರು, ಜು.17(ಎಂಟಿವೈ)- ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ಜು.18ರಿಂದ 25ರವರೆಗೆ ಗುಜರಾತ್ ಕರಕುಶಲ ಉತ್ಸವ ಆಯೋಜಿಸಲಾಗಿದೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗ ಜಂಟಿ ನಿರ್ದೇಶಕ ಡಾ.ಎಚ್.ಆರ್.ಮಹದೇವಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್ ಸರ್ಕಾರದ ಇಂಡಸ್ಟ್ರಿಯಲ್ ಎಕ್ಸಟೆನ್ಷನ್ ಕಾಟೇಜ್ (ಇಂಡೆಸ್ಟ್ಸ್-ಸಿ) ಸಹಯೋಗದಲ್ಲಿ ಗುಜರಾತ್ ಕರಕುಶಲ ಉತ್ಸವ ನಡೆಸಲಾಗುತ್ತಿದೆ. ಜು.18ರಂದು ಸಂಜೆ 4ಕ್ಕೆ ಇಂಡೆಸ್ಟ್ಸ್-ಸಿ ಕಾರ್ಯನಿರ್ವಾ ಹಕ ನಿರ್ದೇಶಕ ಡಿ.ಎಂ.ಶುಕ್ಲ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಜೆಎಸ್‍ಎಸ್ ಮಹಾವಿದ್ಯಾಪೀಠದ ಹಣಕಾಸು ವಿಭಾಗದ ನಿರ್ದೇಶಕ ಎಸ್. ಪುಟ್ಟಬಸಪ್ಪ, ಜೆಎಸ್‍ಎಸ್ ಮಹಾವಿದ್ಯಾಪೀಠದ ಲೆಕ್ಕ ಪರಿಶೋಧಕ ಮತ್ತು ಲೆಕ್ಕ ವಿಭಾಗದ ನಿರ್ದೇಶಕ ಕೆ.ಆರ್.ಸಂತಾನಂ ಭಾಗವಹಿಸಲಿದ್ದಾರೆ ಎಂದರು.
ಗುಜರಾತ್ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರಿಯಾಶೀಲರಾಗಿರುವ 50ಕ್ಕೂ ಹೆಚ್ಚು ಕುಶಲಕರ್ಮಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ. ಇವರ ಪಟೋಲ ಸೀರೆ, ಬಾಂದಿನಿ ಸೀರೆ, ಕಸೂತಿ ಮಾಡಿದ ಬೆಡ್‍ಶೀಟ್, ಟವೆಲ್, ಕುಶನ್ ಕವರ್, ಪರಿಸರ ಸ್ನೇಹಿ ಆಭರಣ, ಡ್ರೆಸ್ ಮೆಟೀರಿಯಲ್, ಮಣ್ಣಿನಿಂದ ಮಾಡಿದ ವಸ್ತುಗಳು, ಬೀಡ್ ವರ್ಕ್, ಕುರ್ತಿ, ಚನಿಯಾ ಚೋಲಿ ಹಾಗೂ ಇನ್ನಿತರ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವಿದೆ. ತಯಾರಕರಿಂದಲೇ ನೇರವಾಗಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಒದಗಿಸುವ ಗುಜರಾತ್ ಸರ್ಕಾರದ ಯತ್ನದ ಅಂಗವಾಗಿ ಇಲ್ಲಿ ಗುಜರಾತ್ ಸಂಸ್ಕೃತಿಯ ಉಡುಗೆ, ತೊಡುಗೆ, ಅಲಂಕಾರಿಕ ವಸ್ತುಗಳು ನೇರವಾಗಿ ಕಡಿಮೆ ಬೆಲೆಯಲ್ಲಿ ದೊರಕಲಿವೆ ಎಂದರು. ಗುಜರಾತ್‍ನ ಪ್ರಸಿದ್ಧ ರುಚಿಕರವಾದ ಖಾದ್ಯಗಳು, ಸಿಹಿ ತಿನಿಸುಗಳು ಸಹಾ ಲಭ್ಯವಿದೆ. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದರು. ಇದೇ ವೇಳೆ ಕುಶಲ ಕರ್ಮಿಗಳು ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಗೋಷ್ಠಿಯಲ್ಲಿ ಗುಜರಾತ್ ಇಂಡೆಕ್ಸ್ಟ್-ಸಿ ವ್ಯವಸ್ಥಾಪಕ ಡಾ.ಸ್ನೇಹಲ್ ಡಿ.ಮಕ್ವಾನ, ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನ ಕಾರ್ಯಕ್ರಮ ಶಿವನಂಜಯ್ಯ, ಸಂಯೋಜಕ ರಾಕೇಶ್‍ರೈ ಹಾಜರಿದ್ದರು.

Translate »