ಮೈಸೂರಲ್ಲಿ ಹಜ್ ಯಾತ್ರಾರ್ಥಿಗಳಿಗೆ ತರಬೇತಿ, ರೋಗ ನಿರೋಧಕ ಚುಚ್ಚುಮದ್ದು
ಮೈಸೂರು

ಮೈಸೂರಲ್ಲಿ ಹಜ್ ಯಾತ್ರಾರ್ಥಿಗಳಿಗೆ ತರಬೇತಿ, ರೋಗ ನಿರೋಧಕ ಚುಚ್ಚುಮದ್ದು

July 12, 2018

ಮೈಸೂರು:  ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಿಂದ 2018ರ ಹಜ್ ಯಾತ್ರೆಗೆ 350ಕ್ಕೂ ಹೆಚ್ಚು ಮಂದಿ ತೆರಳಲಿದ್ದು, ಬುಧವಾರ ಹಜ್ ಯಾತ್ರಾರ್ಥಿಗಳಿಗೆ ಅಗತ್ಯ ತರಬೇತಿ ಹಾಗೂ ರೋಗ ನಿರೋಧಕ ಚುಚ್ಚುಮದ್ದು ನೀಡಲಾಯಿತು.

ಆ.1ರಿಂದ ತಂಡಗಳಾಗಿ ಯಾತ್ರಾರ್ಥಿಗಳು ವಿಮಾನದಲ್ಲಿ ಪ್ರಯಾಣ ಬೆಳೆಸಲಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಹಜ್ ಕಮಿಟಿ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಉದಯಗಿರಿಯ ಪಿ ಅಂಡ್ ಟಿ ಕ್ವಾಟ್ರಸ್ ರಸ್ತೆಯ ಆರ್‍ಕೆ ಪ್ಯಾಲೆಸ್ ಫಂಕ್ಷನ್ ಹಾಲ್‍ನಲ್ಲಿ ಇಂದು ಹಮ್ಮಿಕೊಂಡಿದ್ದ ಯಾತ್ರೆ ಸಂಬಂಧ ತರಬೇತಿ ಹಾಗೂ ರೋಗ ನಿರೋಧಕ ಚುಚ್ಚುಮದ್ದು ಶಿಬಿರದಲ್ಲಿ ಮೈಸೂರು ಜಿಲ್ಲೆಯ 279, ಮಂಡ್ಯ ಜಿಲ್ಲೆಯ 62 ಹಾಗೂ ಚಾಮರಾಜನಗರ ಜಿಲ್ಲೆಯ 41 ಯಾತ್ರಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿ, ರೋಗ ನಿರೋಧಕ ಚುಚ್ಚುಮದ್ದು ನೀಡಲಾಯಿತು.

ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸುವ ಹಿನ್ನೆಲೆಯಲ್ಲಿ ರೋಗ ನಿರೋಧಕ ಚುಚ್ಚುಮದ್ದು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಯಾತ್ರಾರ್ಥಿಗಳಿಗೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮೊಹಮ್ಮದ್ ಸಿರಾಜ್ ಅಹಮ್ಮದ್ ನೇತೃತ್ವದಲ್ಲಿ ವೈದ್ಯರಾದ ಡಾ.ನಾಗೇಶ್‍ರಾವ್, ಡಾ.ಶ್ರೀನಿವಾಸ್, ಡಾ.ಕೆ.ಮಹೇಶ್, ಡಾ.ನಿಶಾಂತ್, ಡಾ.ರಮ್ಯಾ ಹಾಗೂ ಡಾ.ಫೈಜಾನಾ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚುಚ್ಚುಮದ್ದು ನೀಡಿದರಲ್ಲದೆ, ಔಷಧೋಪಚಾರ ತೆಗೆದುಕೊಂಡಿರುವ ಆರೋಗ್ಯ ಚೀಟಿಗಳನ್ನು ಯಾತ್ರಾರ್ಥಿಗಳಿಗೆ ವಿತರಣೆ ಮಾಡಲಾಯಿತು.

ಕರ್ನಾಟಕ ರಾಜ್ಯದ ಹಜ್ ಯಾತ್ರೆ ಕೋಟಾದಲ್ಲಿ ಸುಮಾರು 6 ಸಾವಿರ ಮಂದಿಗೆ ಯಾತ್ರೆ ಕೈಗೊಳ್ಳಲು ಅವಕಾಶವಿದ್ದು, ರಾಜ್ಯಾದ್ಯಂತ ಸುಮಾರು 23 ಸಾವಿರ ಮಂದಿ ಯಾತ್ರೆಗೆ ತೆರಳಲು ಅರ್ಜಿಸಲ್ಲಿಸಿದ್ದರು. ಲಾಟರಿ ಮೂಲಕ ಕರ್ನಾಟಕ ರಾಜ್ಯ ಹಜ್ ಕಮಿಟಿ ಆಯ್ಕೆ ಪ್ರಕ್ರಿಯೆ ನಡೆಸಿತ್ತು. ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಪುರುಷರು ಹಾಗೂ ಮಹಿಳೆಯರು ಸೇರಿದಂತೆ 350ಕ್ಕೂ ಹೆಚ್ಚು ಮಂದಿ ಆಯ್ಕೆಯಾಗಿದ್ದಾರೆ.

ಆ.1ರಿಂದ 15ರವರೆಗೆ ತಂಡಗಳಾಗಿ ಪ್ರಯಾಣ ಆರಂಭವಾಗಲಿದ್ದು, ಯಾತ್ರೆಯ ಒಟ್ಟು ಅವಧಿ 40 ದಿನಗಳಾಗಿವೆ. ಪ್ರಯಾಣ, ವಸತಿ ಸೇರಿದಂತೆ ತಲಾ 2 ಲಕ್ಷದ 34 ಸಾವಿರ ರೂ. ಈ ಬಾರಿಯ ಹಜ್ ಯಾತ್ರೆಗೆ ವೆಚ್ಚವಾಗಲಿದೆ. ಈ ವೆಚ್ಚವನ್ನು ಯಾತ್ರಾರ್ಥಿಗಳು ಭರಿಸಬೇಕಿದ್ದು, ಸರ್ಕಾರ ಹಜ್ ಕಮಿಟಿ ಮೂಲಕ ಪ್ರಯಾಣಕ್ಕೆ ಬೇಕಿರುವ ವ್ಯವಸ್ಥೆಗಳನ್ನು ಮಾಡಿಕೊಡಲಿದೆ ಎಂದು ಮೈಸೂರು ಜಿಲ್ಲಾ ಹಜ್ ಕಮಿಟಿ ಮೂಲಗಳು ತಿಳಿಸಿವೆ.

ಹಜ್ ಯಾತ್ರೆ ಸಂಬಂಧ ಧಾರ್ಮಿಕ ವಿಧಿವಿಧಾನಗಳ ಬಗ್ಗೆ ಉಪನ್ಯಾಸ ನೀಡುತ್ತಿರುವುದು.

ಯಾತ್ರೆಯ ಸ್ಥಳವಾದ ಸೌದಿ ಅರೇಬಿಯಾದ ಕಾನೂನು ಕಟ್ಟಳೆಗಳ ಬಗ್ಗೆ ಶಿಬಿರದಲ್ಲಿ ಯಾತ್ರಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಜೊತೆಗೆ ಇಸ್ಲಾಂ ಧಾರ್ಮಿಕ ಗುರುಗಳು ಯಾತ್ರೆಗೆ ಸಂಬಂಧಿಸಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ಬೋಧಿಸಿದರು.

ಮೈಸೂರಿನ ಸರ್‍ಖಾಜಿ ಮೌಲನಾ ಮೊಹಮ್ಮದ್ ಉಷ್ಮಾನ್ ಶರೀಫ್ ಶಾಹ ಅವರ ಅಧ್ಯಕ್ಷತೆಯಲ್ಲಿ ಇನ್ನಿತರ ಧಾರ್ಮಿಕ ಗುರುಗಳು ಯಾತ್ರೆಯ ಬಗ್ಗೆ ಧಾರ್ಮಿಕ ವಿಧಿವಿಧಾನಗಳನ್ನು ಬೋಧಿಸಿದರು. ಮೌಲನಾ ಮುಫ್ತಿ ತಾಜುದ್ದೀನ್ ಸಾಹೇಬ್, ಮೌಲನಾ ಮಕ್ಬುಲ್ ಅಹಮದ್ ನಿಜಾಮಿ ಸಾಹೇಬ್ ಸೇರಿದಂತೆ ಮತ್ತಿತರ ಧಾರ್ಮಿಕ ಸಂತರು ಧಾರ್ಮಿಕ ಸಂದೇಶ ನೀಡಿದರು. ಪಾಲಿಕೆ ಸದಸ್ಯರು ಹಾಗೂ ಮೈಸೂರು ಜಿಲ್ಲಾ ಹಜ್ ಕಮಿಟಿ ಸಂಚಾಲಕ ಸುಹೇಲ್ ಬೇಗ್, ಸಹ ಸಂಚಾಲಕ ಸೈಯದ್ ಅಬ್ಬಾಸ್, ಪಾಲಿಕೆ ಸದಸ್ಯ ಶೌಕತ್ ಪಾಷ ಮತ್ತಿತರರು ಹಾಜರಿದ್ದರು.

Translate »