ಸೆಪ್ಟೆಂಬರ್‌ನಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಆರಂಭ
ಮೈಸೂರು

ಸೆಪ್ಟೆಂಬರ್‌ನಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಆರಂಭ

July 12, 2018

ಮೈಸೂರು: ಕೇಂದ್ರ ಸರ್ಕಾರದ ಅನುದಾನದಲ್ಲಿ ಬೆಂಗಳೂರು-ಮೈಸೂರು ನಡುವೆ 10 ಪಥದ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡುತ್ತಿದ್ದು, ಸೆಪ್ಟೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.

ನಂಜರಾಜ ಬಹದ್ದೂರ್ ಛತ್ರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ಸಂಪರ್ಕ ಕಲ್ಪಿಸುವುದು ದೊಡ್ಡ ಸಮಸ್ಯೆಯಾಗಿತ್ತು. ಹಾಗಾಗಿ 2014ರಲ್ಲಿ ನರೇಂದ್ರಮೋದಿಯವರು ಪ್ರಧಾನಿಯಾದ ನಂತರ ಮೈಸೂರು-ಬೆಂಗಳೂರು ನಡುವಿನ ಜೋಡಿಹಳಿ ರೈಲುಮಾರ್ಗ ಪೂರ್ಣ ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗಿದೆ ಎಂದರು.

ಹಾಗೆಯೇ ರಸ್ತೆಯ ಮೇಲಿನ ಒತ್ತಡವನ್ನು ತಗ್ಗಿಸಲು ಬೆಂಗಳೂರಿನ ಕೆಂಗೇರಿಯ ನೈಸ್ ರಸ್ತೆ ಜಂಕ್ಷನ್‍ನಿಂದ ಮೈಸೂರಿನವರೆಗೆ 117 ಕಿಲೋಮೀಟರ್ 10 ಪಥದ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡುತ್ತಿದ್ದು, ಭೂ ಸ್ವಾಧೀನಕ್ಕೆ 3 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಒಟ್ಟು 7 ಸಾವಿರ ಕೋಟಿ ವೆಚ್ಚದಲ್ಲಿ 10 ಪಥದ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಇದರಲ್ಲಿ 6 ಪಥ ಹೈವೇ ಇರಲಿದ್ದು, ಪಕ್ಕದಲ್ಲಿ 2 ಸರ್ವಿಸ್ ಲೈನ್ ಇರಲಿದೆ. ಸರ್ವಿಸ್ ರಸ್ತೆಗಳೂ ಡಬಲ್ ರಸ್ತೆಗಳೇ ಆಗಿರುತ್ತವೆ. ಸೆಪ್ಟಂಬರ್ ಮೊದಲು ಅಥವಾ 2ನೇ ವಾರ, ಏಕಕಾಲದಲ್ಲಿ 10 ಕಡೆಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. 24 ತಿಂಗಳೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಮೈಸೂರಿನ ಜನತೆಗೆ ಅರ್ಪಿಸಲಾಗುವುದು ಎಂದ ಅವರು, ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದ ಅವರು, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣರವರು ಮೈಸೂರು-ಬೆಂಗಳೂರು ನಡುವಿನ 10 ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಿದ್ದ ಭೂಸ್ವಾದೀನ ಪ್ರಕ್ರಿಯೆ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಅವರಿಗೆ ಧನ್ಯವಾದ ಅರ್ಪಿಸಿದರು.

Translate »