ಮೈಸೂರು: ನಂಜರಾಜ ಬಹದ್ದೂರ್ ಛತ್ರದಲ್ಲಿ ಹಸ್ತಶಿಲ್ಪಿ ಸಂಸ್ಥೆಯು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 6 ದಿನಗಳ ಕಾಲ ಆಯೋಜಿಸಿರುವ ಬೃಹತ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ `ಸಿಲ್ಕ್ ಇಂಡಿಯಾ-2018’ಕ್ಕೆ ಬುಧವಾರ ಚಾಲನೆ ದೊರೆಯಿತು.
ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚೀಪುರಂ ವರೆಗಿನ ರೇಷ್ಮೆ ಸೀರೆ ಉತ್ಪಾದಕರು, ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು ಭಾಗವಹಿಸಿದ್ದು, ದೇಶದ 20ಕ್ಕೂ ಹೆಚ್ಚು ರಾಜ್ಯಗಳ ನೇಕಾರರು, ಕುಶಲಕರ್ಮಿಗಳು ಉತ್ಪಾದಿಸುವ ತಸ್ಸರ್ ರೇಷ್ಮೆ ಸೀರೆಗಳು, ಕ್ರೇಪ್ ಮತ್ತು ಜಾರ್ಟೆಟ್ ಸಿಲ್ಕ್ ಸೀರೆಗಳು, ಅರಿಣ ರೇಷ್ಮೆ ಸೀರೆಗಳು, ಧರ್ಮಾವರಂ ಸೀರೆಗಳು, ಕಾಂಚಿಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು, ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು, ಕೋಲ್ಕತ್ತಾ ಗಣಪತಿ ಸೀರೆಗಳು, ಢಾಕಾ ಸೀರೆಗಳು, ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬುಲ್‍ಚೂರಿ ರೇಷ್ಮೆ, ಮಟ್ಕಾ ಸೀರೆಗಳು, ಪ್ರೀಂಟೆಡ್ ಸೀರೆಗಳು, ಪಶ್ಮೀನಾ ಸೀರೆಗಳು, ಡಿಸೈನರ್ ಡ್ರೆಸ್ ಮೇಟಿರಿಯಲ್ಸ್‍ಗಳು ಮತ್ತು ಸೀರೆಗಳು, ಬಾಗಲ್‍ಪುರ್ ರೇಷ್ಮೆ ಸೀರೆ ಮತ್ತು ಡ್ರೆಸ್,ಉಪ್ಪಡಾ ಮತ್ತು ಸೀರೆಗಳು ಸೇರಿದಂತೆ ಮತ್ತಿತರೆ ರಾಜ್ಯಗಳ ಪ್ರಸಿದ್ಧ ಸೀರೆಗಳು ದೊರೆಯಲಿದ್ದು, 1,800 ರೂ.ನಿಂದ 1,35,000 ರೂ.ವರೆಗಿನ ಸೀರೆಗಳು ಲಭ್ಯವಿವೆ.
ಸಂಸದ ಪ್ರತಾಪಸಿಂಹ ಅವರು ಮೇಳಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಮೈಸೂರಿನಲ್ಲಿ ದೇಶದ ವಿವಿಧ ಭಾಗಗಳ ರೇಷ್ಮೆ ಸೀರೆಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ. ಅಂಗಡಿಗಳಲ್ಲಿ 80-90 ಸಾವಿರ ಬೆಲೆಬಾಳುವ ಸೀರೆಗಳು 30-40 ಸಾವಿರಕ್ಕೆ ಅಂದರೆ, ಅರ್ಧ ಬೆಲೆಗೆ ದೊರೆಯಲಿವೆ. ಮೈಸೂರಲ್ಲಿ ಮೈಸೂರು ಸಿಲ್ಕ್ ಪ್ರಖ್ಯಾತಿ ಪಡೆದಿದ್ದು, ಅದರ ಜತೆಗೆ ಬೇರೆ ಬೇರೆ ಮಾದರಿಯ ರೇಷ್ಮೆ ಸೀರೆಗಳನ್ನು ಖರೀದಿಸಬಹುದು. ಮೈಸೂರಿನ ಜನತೆ ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.
ಮೇಳವು ಜು.16ರವರೆಗೂ ನಡೆಯಲಿದೆ. 50ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿದ್ದು, ಪ್ರತಿದಿನ ಬೆಳಗ್ಗೆ 10.30ರಿಂದ ರಾತ್ರಿ 8.30ರವರೆಗೆ ಮೇಳ ತೆರೆದಿರಲಿದೆ. ಉಪಮೇಯರ್ ಇಂದಿರಾ ಮಹೇಶ್, ಮಾಜಿ ಉಪಮೇಯರ್ ವನಿತಾ ಪ್ರಸನ್ನ, ಪಾಲಿಕೆ ಸದಸ್ಯೆ ಅಶ್ವಿನಿ ಅನಂತು, ಕಾರ್ಯಕ್ರಮದ ಆಯೋಜಿಕ ಟಿ.ಅಭಿನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.