ಪೋಕ್ಸೋ ಆರೋಪಿ ನೇಣಿಗೆ ಶರಣು
ಮೈಸೂರು

ಪೋಕ್ಸೋ ಆರೋಪಿ ನೇಣಿಗೆ ಶರಣು

May 25, 2018

ಮೈಸೂರು: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಆರೋಪ ಎದುರಿಸುತ್ತಿದ್ದ ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ನಡೆದಿದೆ.

ಎನ್.ಆರ್.ಮೊಹಲ್ಲಾ, ನಾಯ್ಡು ನಗರ 2ನೇ ಹಂತದ ನಿವಾಸಿ ವಿಜಯೇಂದ್ರ (22), ಬುಧವಾರ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ. ಅಮೆಜಾನ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿದ್ದ ವಿಜಯೇಂದ್ರ, ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಆರೋಪ ಎದುರಿಸುತ್ತಿದ್ದ. ಈ ಸಂಬಂಧ ವಿಜಯೇಂದ್ರನ ವಿರುದ್ಧ ಪೋಕ್ಸೋ ಕಾಯ್ದೆಯಡಿ ವರ್ಷದ ಹಿಂದೆ ಪ್ರಕರಣ ದಾಖಲಿಸಿಕೊಂಡಿದ್ದ ಎನ್.ಆರ್.ಠಾಣೆ ಪೊಲೀಸರು, ವಿಚಾರಣೆ ನಡೆಸುತ್ತಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆಯಾದರೂ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್.ಆರ್.ಠಾಣೆ ಇನ್ಸ್‍ಪೆಕ್ಟರ್ ಸವಿತ್ರು ತೇಜ್, ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ದೂರು ನೀಡಿರುವ ವಿಜಯೇಂದ್ರನ ಪೋಷಕರಿಂದಲೂ ಈ ಬಗ್ಗೆ ಮಾಹಿತಿ ದೊರೆತಿಲ್ಲ. ತನಿಖೆ ವೇಳೆಯಲ್ಲಿ ಸ್ಪಷ್ಟತೆ ದೊರಕಬಹುದು ಎಂದು ತಿಳಿಸಿದ್ದಾರೆ.

ಸದ್ಯ ಸ್ಥಳ ಮಹಜರು ನಡೆಸಿ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿರುವ ಪೊಲೀಸರು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »