ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಎಂಎಲ್‍ಸಿ  ಮಾಡಿ, ಸಚಿವ ಸ್ಥಾನ ಕಲ್ಪಿಸಲು ಮನವಿ
ಮೈಸೂರು

ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಎಂಎಲ್‍ಸಿ  ಮಾಡಿ, ಸಚಿವ ಸ್ಥಾನ ಕಲ್ಪಿಸಲು ಮನವಿ

May 25, 2018

ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಪರಾಜಿತಗೊಂಡ ಜೆಡಿಎಸ್‍ನ ಪ್ರೊ.ಕೆ.ಎಸ್. ರಂಗಪ್ಪ, ಶಿಕ್ಷಣ ಕ್ಷೇತ್ರದಲ್ಲಿ ನುರಿತವರಾಗಿದ್ದು, ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಉನ್ನತ ಶಿಕ್ಷಣ ಸಚಿವರನ್ನಾಗಿ ನೇಮಕ ಮಾಡಿಕೊಳ್ಳುವಂತೆ ಮೈಸೂರು ಜಿಲ್ಲಾ ಕನ್ನಡ ಚಳವಳಿ ಗಾರರ ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿವಿಯಲ್ಲಿ ಅಧ್ಯಾಪಕ, ನಿರ್ದೇಶಕ, ಸಂಶೋಧಕ ಹಾಗೂ ಕುಲಪತಿಯಾಗಿ ಸೇವೆ ಸಲ್ಲಿಸಿರುವ ಪ್ರೊ. ಕೆ.ಎಸ್.ರಂಗಪ್ಪ, ಮೈಸೂರು ವಿವಿಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ಬರುವಂತೆ ಮಾಡಿದ್ದಾರೆ. ಅಮೆರಿಕ, ಕೆನಡ, ಜರ್ಮನ್, ಜಪಾನ್, ಕೊರಿಯಾ ಇತ್ಯಾದಿ ರಾಷ್ಟ್ರಗಳಲ್ಲಿ ವ್ಯಾಸಂಗ, ಸಂಶೋಧನೆ ಮತ್ತು ಉನ್ನತ ಮಟ್ಟದ ಅಧ್ಯಯನ ಕೈಗೊಂಡಿದ್ದು, ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವವುಳ್ಳ , ಬುದ್ಧಿಜೀವಿ ಪ್ರೊ.ಕೆ.ಎಸ್.ರಂಗಪ್ಪರನ್ನು ಸಿಎಂ ಕುಮಾರಸ್ವಾಮಿ ಅವರು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೆ ಸರ್ಕಾರಕ್ಕೂ ಗಟ್ಟಿಯಾದ ಮೆರಗು ಬರುವುದರಲ್ಲಿ ಸಂಶಯವೇ ಇಲ್ಲ. ಜೊತೆಗೆ ಉನ್ನತ ಶಿಕ್ಷಣ ಕ್ಷೇತ್ರದ ಉನ್ನತಿಯೂ ಸಾಧ್ಯವಾಗಲಿದೆ ಎಂದು ಹೇಳಿದರು.

Translate »