ಮೈಸೂರಲ್ಲಿ ಭಕ್ತಿ ಭಾವದ ಹನುಮ ಸ್ಮರಣೆ
ಮೈಸೂರು

ಮೈಸೂರಲ್ಲಿ ಭಕ್ತಿ ಭಾವದ ಹನುಮ ಸ್ಮರಣೆ

December 6, 2022

ಮೈಸೂರು, ಡಿ.5(ಆರ್‍ಕೆಬಿ)- ಹನುಮ ಜಯಂತಿ ಅಂಗವಾಗಿ ಮೈಸೂರಿನ ವಿವಿಧೆಡೆ ಸೋಮವಾರ ಭಕ್ತಿ ಭಾವದಿಂದ ಹನುಮ ಸ್ಮರಣೆ ಮಾಡಲಾಯಿತು. ಹನುಮ ದೇವಾಲ ಯದಲ್ಲಿ ಹೋಮ, ಹವನ, ಹನುಮನಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆಗಳು ನೆರವೇರಿದವು. ಮುಂಜಾನೆಯಿಂದಲೇ ಜನರು ದೇವರಿಗೆ ಭಕ್ತಿಯಿಂದ ನಮಿಸಿದರು.

ನಂಜನಗೂಡು ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾ ನಂದ ಆಶ್ರಮದ ಕಾರ್ಯಸಿದ್ಧಿ ಹನುಮಾನ್ ದೇವ ಸ್ಥಾನದಲ್ಲಿ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಆಂಜನೇಯ ನಿಗೆ ವಿಶೇಷ ಅಭಿಷೇಕ, ದೇವರಿಗೆ ಕದಳಿ ಅಲಂಕಾರ ಮಾಡಲಾಗಿತ್ತು. ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳು ಮೊದಲಿಗೆ ಮೂಲ ಹನುಮ ದೇವರು ಹಾಗೂ ಸ್ವರ್ಣ ಹನುಮ ಮೂರ್ತಿಗೆ 108 ಹನುಮ ಶ್ಲೋಕದೊಂದಿಗೆ ಅಷ್ಟೋತ್ತರ ಪೂಜಾ ಕೈಂಕರ್ಯ ನೆರವೇರಿಸಿದರು. ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಭಜನಾ ಕಾರ್ಯಕ್ರಮದಲ್ಲಿ ಹನುಮ ಸ್ಮರಣೆ ನಡೆಯಿತು. ಇದಕ್ಕೂ ಮುನ್ನ ಮುಂಜಾನೆ ಮೂರೂ ವರೆ ಗಂಟೆಗಳ ಕಾಲ ಸತತವಾಗಿ ಭಕ್ತರು ದೇವಾಲಯದ ಆವರಣದಲ್ಲಿ ಹನುಮಾನ್ ಚಾಲೀಸ ಪಠಣ ಮಾಡಿದರು.

ಅರಮನೆ ಉತ್ತರ ದ್ವಾರದಲ್ಲಿರುವ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು, ಅಲ್ಲಿ ದೇವರಿಗೆ ವಿಶೇಷ ಅಭಿಷೇಕ ಮತ್ತು ಇತರ ಎಲ್ಲಾ ಸಾಂಪ್ರದಾಯಿಕ ಆಚರಣೆ ಗಳನ್ನು ನೆರವೇರಿಸಲಾಯಿತು. ಇರ್ವಿನ್ ರಸ್ತೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ 22ನೇ ಹನುಮ ಜಯಂತಿ ಪ್ರಯುಕ್ತ ಹೋಮ ನಡೆಯಿತು. ದೇವರಿಗೆ ವಿಶೇಷ ಅಲಂಕಾರದ ಜೊತೆಗೆ ಅಷ್ಟದ್ರವ್ಯ ಮಹಾಗಣಪತಿ ಹೋಮ ಮಾಡಲಾಯಿತು. ದೇವಸ್ಥಾನದಲ್ಲಿ ಭಕ್ತವೃಂದದ ಮುಖ್ಯಸ್ಥರಾದ ಎಸ್.ಚಂದ್ರಶೇಖರ್ ಜಾಧವ್, ವೈ.ಎಸ್.ನಾಗೇಶ್, ಎಸ್.ಶಿವಕುಮಾರ್, ಶ್ರೀನಿಧಿ, ಬಿ.ಗಂಗಾ ಧರ್, ಸತ್ಯನಾರಾಯಣರಾಜು, ಉಷಾರಾಣಿ, ವೆಂಕಟೇಶ್ ಗೋಬಿ, ಬಿ.ಎಸ್.ಹರೀಶ್ ನೇತೃತ್ವದಲ್ಲಿ ವಿಶೇಷ ಹೋಮ, ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಬನ್ನಿಮಂಟಪ ಹನುಮಂತನಗರದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿಯೂ ದೇವರಿಗೆ ಚರುಷ್ಟಾರ್ಚನೆ, ಪಂಚಾಮೃತ ಅಭಿಷೇಕ, ಶ್ರೀರಾಮ ತಾರಕ ಹೋಮ, ಸ್ವಾಮಿಯ ಉತ್ಸವ, ಅನ್ನಸಂತರ್ಪಣೆಗಳು ನಡೆದವು.

ಟಿ.ಕೆ.ಲೇಔಟ್‍ನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆ ದೇವರಿಗೆ ಅಭಿಷೇಕ, ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ದಸರಾ ವಸ್ತುಪ್ರದರ್ಶನ ಮೈದಾನದಲ್ಲಿರುವ ಪುರಾತನ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಡಿ.ದೇವರಾಜ ಅರಸು ರಸ್ತೆಯಲ್ಲಿರುವ ಮಾರುತಿ ದೇವ ಸ್ಥಾನ, ಎಂ.ಜಿ.ರಸ್ತೆ ಪಾತಾಳಾಂಜನೇಯಸ್ವಾಮಿ ದೇವಸ್ಥಾನ, ಕುವೆಂಪುನಗರ ಕಾಂಪ್ಲೆಕ್ಸ್ ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ಮೈಸೂರಿನ ಎಲ್ಲಾ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹನುಮ ಜಯಂತಿಯನ್ನು ಭಕ್ತಿಯಿಂದ ಆಚರಿಸಲಾಯಿತು. ಎಲ್ಲೆಡೆ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು.

Translate »