ಸರ್ಕಾರದಿಂದಲೇ ಐದು ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಭರಿಸುವ ಯೋಜನೆ ಜಾರಿ
News

ಸರ್ಕಾರದಿಂದಲೇ ಐದು ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಭರಿಸುವ ಯೋಜನೆ ಜಾರಿ

December 4, 2022

ಬೆಂಗಳೂರು, ಡಿ. 3(ಕೆಎಂಶಿ)-ಅಂಗವಿಕಲರ ಆರೋಗ್ಯ ಕ್ಕಾಗಿ ವಿಶೇಷ ವಿಮಾ ಯೋಜನೆ ರೂಪಿಸಿ, 5 ಲಕ್ಷದವರೆಗಿನ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವ ಯೋಜನೆ ಪ್ರಾರಂಭಿ ಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಅವರು ಇಂದು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ವತಿಯಿಂದ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ-2022 ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಕಲಚೇತನರು ಧೈರ್ಯದಿಂದ ಯಶಸ್ವಿಯಾಗಿ ಬದುಕು ನಡೆಸಲು ಸರ್ಕಾರ ಎಲ್ಲಾ ಸಹಕಾರವನ್ನು ನೀಡಲಿದೆ. ಸರ್ಕಾರ ನಿರ್ಮಿಸುವ ಮನೆಗಳಲ್ಲಿ ಅಂಗವಿಕಲರಿಗೆ ಶೇ.3ರಷ್ಟು ಮೀಸಲಾತಿಯನ್ನು ನೀಡಲಾಗುವುದು. ಬುದ್ಧಿಮಾಂದ್ಯ ಮಕ್ಕಳಿಗೆ ಶೆಲ್ಟರ್ಡ್ ವರ್ಕ್‍ಶಾಪ್ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದರು. ಸರ್ಕಾರದ ವತಿಯಿಂದ ಅಂಗವಿಕಲರಿಗೆ ಪವರ್ಡ್ ಟ್ರೈಸೈಕಲ್ ನೀಡಲಾಗುತ್ತಿದೆ. ಈ ವರ್ಷ ಈ ಯೋಜನೆಗೆ 25 ಕೋಟಿ ರೂ.ಗಳನ್ನು ನೀಡಿ 2 ಸಾವಿರ ಟ್ರೈ ಸೈಕಲ್‍ಗಳನ್ನು ಮಾರ್ಚ್ 31ರೊಳಗೆ ನೀಡಲು ತೀರ್ಮಾನಿಸಿರುವುದಾಗಿ ತಿಳಿಸಿದರು. ವಸತಿ ಶಾಲೆಗಳಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ನೀಡಲಾಗುತ್ತಿದ್ದ 6800 ರೂ.ಗಳನ್ನು 10200 ರೂ.ಗಳಿಗೆ ಹೆಚ್ಚಿಸಲಾಗಿದೆ. ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆಗಳಲ್ಲಿ ನೀಡಲಾಗುತ್ತಿದ್ದ 6000 ರೂ.ಗಳನ್ನು 9000 ರೂ.ಹೆಚ್ಚಿಸಿ ನೀಡಲಾಗುತ್ತಿದೆ.

ಅಂಧ, ಕಿವುಡ ಮಕ್ಕಳ ವಸತಿ ಶಾಲೆಗಳಲ್ಲಿರುವವರಿಗೆ 9300 ರೂ.ಗಳನ್ನು, ವಸತಿರಹಿತ ಶಾಲೆಗಳ ಅಂಧಕಿವುಡ ಮಕ್ಕಳಿಗೆ 7800 ರೂ.ಗಳನ್ನು ,ಹಗಲುಸೇವೆ ಯೋಗಕ್ಷೇಮ ಕೇಂದ್ರಗಳಿಗೆ 15000 ರೂ.ಗಳನ್ನು , ವೃದ್ಧಾಶ್ರಮ ಕೇಂದ್ರಗಳ ನಿರ್ವಹಣೆಗೆ 12 ಲಕ್ಷ ರೂ. ನೀಡಲಾಗುತ್ತಿದೆ. ಮುಖ್ಯಮಂತ್ರಿ ಯಾದ ತಕ್ಷಣ ವಿಕಲಚೇತನರ ಮಾಸಾಶನವನ್ನು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸವಲತ್ತುಗಳನ್ನು ಹೆಚ್ಚಿಸಲಾಗುವುದು. ಆಸಿಡ್ ದಾಳಿಯಿಂದ ಬಳಲುವ ಹೆಣ್ಣು ಮಕ್ಕಳಿಗೆ 3000 ರೂ. ದಿಂದ 10000 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ವಿಕಲಚೇತನರ ವಿದ್ಯಾಭ್ಯಾಸಕ್ಕಾಗಿ ಮುಂದಿನ ಬಜೆಟ್‍ನಲ್ಲಿ ವಿಶೇಷ ಅನುದಾನವನ್ನು ಮೀಸಲಿರಿಸಲಾಗು ವುದು ಎಂದರು. ದೇವರು ಸೃಷ್ಟಿ ಮಾಡುವಾಗ ಹಲವಾರು ಸವಾಲುಗಳನ್ನು ಮನುಷ್ಯನಿಗೆ ಇಟ್ಟಿರುತ್ತಾನೆ. ಎಲ್ಲ ಅಂಗ ಇದ್ದವರಿಗೂ ದೇವರು ಸವಾಲು ಮುಂದಿಟ್ಟಿರುತ್ತಾನೆ. ಅಂಗಾಂಗಳ ಕೊರತೆ ಇದೆಯೆಂಬ ಕೀಳರಿಮೆ ಬೇಡ. ವಿಕಲಚೇತನರು ವಿಶೇಷವಾದ ದೇವರ ಮಕ್ಕಳು. ಸವಾಲು ಗಳನ್ನು ಎದುರಿಸುವ ವಿಶೇಷ ಶಕ್ತಿಯನ್ನು ಹಾಗೂ ಮನೋಸ್ಥೈರ್ಯ ವನ್ನು ದೇವರು ನಿಮಗೆ ನೀಡಿದ್ದಾನೆ. ನೀವು ಆತ್ಮವಿಶ್ವಾಸದಿಂದ ಇರಬೇಕು. ನಾವೂ ಇತರರಂತೆ ಬದುಕಿ ತೋರಿಸುತ್ತೇವೆ ಎಂಬ ಛಲ ಮತ್ತು ನಂಬಿಕೆ ಇರಬೇಕು. ನಿಮಗೆ ಅನುಕಂಪದ ಅವಶ್ಯಕತೆ ಇಲ್ಲ. ವಿಕಲಚೇತನರನ್ನು ಸಶಕ್ತಗೊಳಿಸುವ ಸಮಾಜದ ಅವಶ್ಯಕತೆ ಇದೆ. ಕೆಳಗೆ ಬೀಳುವ ವ್ಯಕ್ತಿಯನ್ನು ಮೇಲೆತ್ತುವುದು ಮಾನವ ಧರ್ಮ, ಅದನ್ನು ಮನುಷ್ಯರು ಮರೆಯದೇ ನೆರವು ನೀಡಬೇಕು. ಇದು ವಿಶ್ವ ಮಾನವ ಸಮಾಜ. ಒಬ್ಬರಿಗೊಬ್ಬರು ಕೈ ಹಿಡಿದು ನಡೆಯುವ ಮಾನವೀಯ ಗುಣವನ್ನು ಎಲ್ಲರೂ ಪಾಲಿಸಬೇಕು ಎಂದರು. ಎಲ್ಲ ಅಂಗಾಂಗಗಳು ಸರಿಯಿದ್ದ ವರಿಗೂ ಸಮಾಧಾನ ಇರುವುದಿಲ್ಲ. ಪರೋಪಕಾರದ ಗುಣವನ್ನು ಬೆಳೆಸಿಕೊಂಡರೆ ಮಾತ್ರ ಸಮಾಧಾನ ದೊರೆಯುತ್ತದೆ. ಸಶಕ್ತರಾಗಿ ರುವವರು ದಿವ್ಯಾಂಗ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಸಹಾಯ ಮಾಡಬೇಕು. ರಾಜ್ಯದಲ್ಲಿ ಸುಮಾರು 40 ರಿಂದ 50 ಲಕ್ಷ ದಿವ್ಯಾಂಗ ಮಕ್ಕಳಿದ್ದು, ಅವರ ಬೆಳವಣಿಗೆಗೆ 7 ಕೋಟಿ ಕನ್ನಡಿಗರು ಸಹಾಯ ಮಾಡುವ ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು. ದೇವರ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಕರೆ ನೀಡಿದರು.

Translate »