ಯುವ ಮನಸ್ಸುಗಳ ಘಾಸಿಗೊಳಿಸುತ್ತಿರುವ  ವಸ್ತ್ರ ರಾಜಕಾರಣ: ಶ್ವೇತಾ ಮಡಪ್ಪಾಡಿ ಬೇಸರ
ಮೈಸೂರು

ಯುವ ಮನಸ್ಸುಗಳ ಘಾಸಿಗೊಳಿಸುತ್ತಿರುವ ವಸ್ತ್ರ ರಾಜಕಾರಣ: ಶ್ವೇತಾ ಮಡಪ್ಪಾಡಿ ಬೇಸರ

February 9, 2022

ಮೈಸೂರು, ಫೆ.8(ಆರ್‍ಕೆಬಿ)- ವಿದ್ಯಾಸಂಸ್ಥೆಗಳಲ್ಲಿ ಸೌಹಾ ರ್ದತೆ ಹಾಗೂ ಸಮಾನತೆಗೆ ದಾರಿಯಾಗಬೇಕಿದ್ದ ಸಮವಸ್ತ್ರ ಇಂದು ಭವಿಷ್ಯದ ಸುಂದರ ಕನಸುಗಳನ್ನು ಹೊತ್ತ ಯುವ ಮನಸುಗಳನ್ನು `ವಸ್ತ್ರ ರಾಜಕಾರಣ’ ವಾಗಿ ಘಾಸಿಗೊಳಿಸುತ್ತಿದೆ ಎಂದು ಲೇಖಕಿ ಡಾ.ಶ್ವೇತಾ ಮಡಪ್ಪಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾದ ಪ್ರತಿವಾದಗಳ ಮುಖಾಂತರ ಬುರ್ಖಾ, ಕೇಸರಿ ಶಾಲು, ನೀಲಿ ಶಾಲುಗಳೊಂದಿಗೆ ನಾವು ಹೊಸ ತಲೆಮಾರುಗಳನ್ನು ಸಾಮೂಹಿಕವಾಗಿ ಮತೀಯ ಚಿಂತನೆಗಳತ್ತ ದೂಡುತ್ತಿದ್ದೇವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.

ಸಹಪಾಠಿಗಳಲ್ಲಿ ನಾವೆಲ್ಲಾ ಒಂದು ಎಂಬ ಏಕತೆಯನ್ನು ಬೆಸೆ ಯುವ ಶೈಕ್ಷಣಿಕ ಸಮವಸ್ತ್ರವು ಧಾರ್ಮಿಕ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ತರಲಾರದು. ಏಕೆಂದರೆ ಅದು ತರಗತಿಗಷ್ಟೇ ಸೀಮಿತ. ಆದರೆ ಇದರಲ್ಲಿ ಯಾವ ಧರ್ಮವಾಗಲೀ, ಪಂಥವಾಗಲೀ, ರಾಜಕೀಯ ವಾಗಲೀ ವಿದ್ಯಾರ್ಥಿಗಳನ್ನು ದಾಳಗಳನ್ನಾಗಿ ಬಳಸಿಕೊಳ್ಳುವು ದನ್ನು ನಮ್ಮಂಥವರು ಬಹಳವಾಗಿ ವಿರೋಧಿಸಬೇಕಾಗಿದೆ ಎಂದರು.

ಶೈಕ್ಷಣಿಕ ಪರಂಪರೆಯಲ್ಲಿ ಬರುವ ಗುರುಶಿಷ್ಯ ಭಾವನೆಯ ಕುರಿತು ಆತಂಕಿತರಾಗಬೇಕಾದ ಅಗತ್ಯತೆ ನಮ್ಮಲ್ಲಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪುರುಷ ಅಧ್ಯಾಪಕರು ಬಹುಕಾಲದಿಂದ ತಮ್ಮ ಕೊಡುಗೆ ನೀಡುತ್ತಾ ಬಂದಿ ದ್ದಾರೆ. ಪುರುಷ ಅಧ್ಯಾಪಕರ ದೃಷ್ಟಿಯಿಂದ ರಕ್ಷಿಸಿಕೊಳ್ಳಲು ನಮಗೆ ಧರ್ಮದ ಹಕ್ಕಿನ ಉಡುಪಿನ ಅವಶ್ಯಕತೆ ಇದೆ ಎಂಬುದರಲ್ಲಿ ಅರ್ಥವಿಲ್ಲ. ಇಂಥ ಹೇಳಿಕೆಗಳು ಹೀಗೆ ಕಿಡಿ ಹೊತ್ತಿಸುತ್ತವೆಯೇ ಹೊರತು, ಜ್ಞಾನದ ಬೆಳಕಾಗಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ಧರ್ಮ ಅಥವಾ ಅದನ್ನು ಬಳಸಿಕೊಳ್ಳುವ ರಾಜಕಾರಣವು ಶಿಕ್ಷಣ ವ್ಯವಸ್ಥೆಯನ್ನು ಗುರಿಯಾಗಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡಲು ಹೊರಟಿರುವುದು ಸರಿಯಲ್ಲ ಎಂದು ತಿಳಿಸಿದರು.

ವಿದ್ಯಾಸಂಸ್ಥೆಗಳಲ್ಲಿ ಹಿಜಾಬ್ ಮಾತ್ರವಲ್ಲ. ಕೇಸರಿ, ನೀಲಿ, ಕೆಂಪು, ಕಪ್ಪು ಯಾವುದಕ್ಕೂ ಆದ್ಯತೆಯಿಲ್ಲದ ಕೇವಲ ವಿದ್ಯೆ ಯನ್ನಷ್ಟೇ ಕೇಂದ್ರೀಕರಿಸಬಲ್ಲ ಸಮವಸ್ತ್ರಕ್ಕೆ ಆದ್ಯತೆ ಇರಲಿ. ಆ ಮೂಲಕ ಎಲ್ಲರೂ ವಿವಿಧತೆಯಲ್ಲಿ ಏಕತೆ ಕಾಣುವಂತಾಗಲಿ ಎಂದು ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಗಣೇಶ ಈಶ್ವರ್‍ಭಟ್, ಬಸವರಾಜು ಉಪಸ್ಥಿತರಿದ್ದರು.

Translate »