ಅಪಘಾತದಲ್ಲಿ ಗಾಯಗೊಂಡಿದ್ದ ನೋಟು ಮುದ್ರಣ ಘಟಕದ  ಅಸಿಸ್ಟೆಂಟ್ ಮ್ಯಾನೇಜರ್ ಪತ್ನಿ ಸಾವು
ಮೈಸೂರು

ಅಪಘಾತದಲ್ಲಿ ಗಾಯಗೊಂಡಿದ್ದ ನೋಟು ಮುದ್ರಣ ಘಟಕದ ಅಸಿಸ್ಟೆಂಟ್ ಮ್ಯಾನೇಜರ್ ಪತ್ನಿ ಸಾವು

February 9, 2022

ಮೈಸೂರು, ಫೆ. 8(ಆರ್‍ಕೆ)- ಕಾರೊಂದು ಸ್ಕೂಟರ್‍ಗೆ ಡಿಕ್ಕಿ ಹೊಡೆದು ಪರಾರಿ ಯಾದ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿ ಯಾಗದೇ ಎರಡು ತಿಂಗಳ ನಂತರ ಸಾವನ್ನಪ್ಪಿದ್ದಾರೆ.

ಮೈಸೂರಿನ ಹೂಟಗಳ್ಳಿ ಕೆಹೆಚ್‍ಬಿ ಕಾಲೋನಿ ನಿವಾಸಿಯಾದ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ನಿಗಮ ನಿಯಮಿತ (ಬಿಆರ್‍ಬಿಎನ್ ಎಂಎನ್)ದ ಸಹಾಯಕ ವ್ಯವಸ್ಥಾಪಕ ಮಂಜುನಾಥ ರಾಜ್ ಅವರ ಪತ್ನಿ ಶ್ರೀಮತಿ ಶ್ರೀದೇವಿ (41) ಸಾವನ್ನಪ್ಪಿದವರು. ಹೂಟಗಳ್ಳಿಯಿಂದ ಪುತ್ರಿ ಗಗನರೊಂದಿಗೆ ಶ್ರೀಮತಿ ಶ್ರೀದೇವಿ ಅವರು ಮೈಸೂರು ನಗರಕ್ಕೆ ಸ್ಕೂಟರ್‍ನಲ್ಲಿ ಬರುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಪಡುವಾರಹಳ್ಳಿ ಬಳಿ ಹುಣಸೂರು ರಸ್ತೆಯಲ್ಲಿ 2021ರ ಡಿಸೆಂಬರ್ 22ರಂದು ಮಧ್ಯಾಹ್ನ 12.10 ಗಂಟೆ ವೇಳೆಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯಿಂದ ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಶ್ರೀದೇವಿ ಹಾಗೂ ಸಣ್ಣಪುಟ್ಟ ಗಾಯಗಳಾಗಿದ್ದ ಗಗನ ಅವರನ್ನು ಸಾರ್ವಜನಿಕರ ನೆರವಿನಿಂದ ಆ ಮಾರ್ಗದಲ್ಲಿ ಬಂದ ಖಾಸಗಿ ಆಸ್ಪತ್ರೆ ವೈದ್ಯರೊಬ್ಬರು ಬೃಂದಾವನ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ತೆರಳಿದ್ದ ಪೊಲೀಸರು ಘಟನೆ ಕುರಿತಂತೆ ಗಗನಳಿಂದ ಹೇಳಿಕೆ ಪಡೆದು ಅಪಘಾತವಾದ ಸ್ಥಳದ ಸಮೀಪ ಅಂಗಡಿಗಳ ಮುಂದೆ ಅಳವಡಿಸಲಾದ ಸಿಸಿ ಕ್ಯಾಮರಾ ಫುಟೇಜ್‍ಗಳನ್ನು ಪಡೆದು ಸ್ಕೂಟರ್‍ಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಕಾರು ಪತ್ತೆ ಮಾಡಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಿಲ್ಲ. ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದ ಕಾರಣ ಶ್ರೀದೇವಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದು ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮಧ್ಯರಾತ್ರಿ ಎರಡು ತಿಂಗಳ ನಂತರ ಕೊನೆಯುಸಿರೆಳೆದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿವಿಪುರಂ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿದ್ದ ಪುತ್ರಿ ಗಗನ ಗುಣಮುಖರಾಗಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಇಂದು ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶ್ರೀದೇವಿ ಅವರ ಮೃತದೇಹವನ್ನು ವಾರಸುದಾರರ ವಶಕ್ಕೆ ಒಪ್ಪಿಸಿದ್ದಾರೆ. ಪತಿ, ಇಬ್ಬರು ಪುತ್ರಿಯರನ್ನು ಅಗಲಿರುವ ಶ್ರೀದೇವಿ ಅವರು ಇತ್ತೀಚೆ ಗಷ್ಟೇ ಹೂಟಗಳ್ಳಿಯಲ್ಲಿ ನಿರ್ಮಿಸಿದ್ದ ಹೊಸ ಮನೆಯಲ್ಲಿ ನೆಲೆಸುವ ಅದೃಷ್ಟವಿಲ್ಲದಂತಾಯ್ತು ಎಂದು ಪತಿ ಮಂಜುನಾಥ ರಾಜ್ ‘ಮೈಸೂರು ಮಿತ್ರ’ನಲ್ಲಿ ದುಃಖ ತೋಡಿಕೊಂಡಿ ದ್ದಾರೆ. ಮೂಲತಃ ಕೋಲಾರ ಜಿಲ್ಲೆಯವರಾದ ಮಂಜುನಾಥರಾಜ್ ಅವರು ನೋಟು ಮುದ್ರಣ ಘಟಕದಲ್ಲಿ ಕೆಲಸ ಮಾಡುತ್ತಿದ್ದರಿಂದ ಮೈಸೂರಿನ ಹೂಟಗಳ್ಳಿಯಲ್ಲಿ ಕುಟುಂಬ ದೊಂದಿಗೆ ವಾಸವಾಗಿದ್ದರು. ಇಂದು ಸಂಜೆ ಹೂಟಗಳ್ಳಿಯಲ್ಲಿ ಶ್ರೀದೇವಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Translate »