ಹಾಸನ-21, ಮಂಡ್ಯ-8 ಸೇರಿ ರಾಜ್ಯದಲ್ಲಿ 67 ಮಂದಿಗೆ ಸೋಂಕು ಸೋಂಕಿತರ ಸಂಖ್ಯೆ 1462ಕ್ಕೆ ಏರಿಕೆ
ಮೈಸೂರು

ಹಾಸನ-21, ಮಂಡ್ಯ-8 ಸೇರಿ ರಾಜ್ಯದಲ್ಲಿ 67 ಮಂದಿಗೆ ಸೋಂಕು ಸೋಂಕಿತರ ಸಂಖ್ಯೆ 1462ಕ್ಕೆ ಏರಿಕೆ

May 21, 2020

ಬೆಂಗಳೂರು, ಮೇ 20-ಮಂಡ್ಯದಲ್ಲಿ 8 ಮತ್ತು ಹಾಸನದಲ್ಲಿ 21 ಸೇರಿದಂತೆ ಬುಧವಾರ ರಾಜ್ಯದಲ್ಲಿ 67 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1462ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 43 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಈವರೆಗೆ ಒಟ್ಟು 41 ಮಂದಿ ಸೋಂಕಿನಿಂದ ಮೃತಪಟ್ಟಂತಾಗಿದೆ. ಮಂಡ್ಯದಲ್ಲಿ 6 ಮತ್ತು 10 ವರ್ಷದ ಬಾಲಕಿಯರು, 66 ವರ್ಷದ ವೃದ್ಧೆ ಸೇರಿದಂತೆ 7 ಮಹಿಳೆಯರು ಹಾಗೂ ಓರ್ವ ಪುರುಷನಿಗೆ ಇಂದು ಸೋಂಕು ದೃಢಪಟ್ಟಿದ್ದು, ಇವರೆಲ್ಲರೂ ಮುಂಬೈನಿಂದ ತವರಿಗೆ ವಾಪಸ್ಸಾದವರಾಗಿದ್ದಾರೆ. ಇದರಿಂ ದಾಗಿ ಮಂಡ್ಯದಲ್ಲಿ ಸೋಂಕಿತರ ಸಂಖ್ಯೆ 168ಕ್ಕೆ ಏರಿಕೆಯಾಗಿದೆ. ಹಾಸನದಲ್ಲಿ ಇಂದು ಒಟ್ಟು 21 ಮಂದಿಗೆ ಸೋಂಕು ದೃಢಪಟ್ಟಿದ್ದು, ಬೇಲೂರಿನ ಖಾಸಗಿ ವೈದ್ಯರೊಬ್ಬರು ಸೋಂಕಿತರಲ್ಲಿ ಸೇರಿದ್ದಾರೆ. ಈ ಜಿಲ್ಲೆಯಲ್ಲಿ 7 ವರ್ಷದ ಬಾಲಕಿ, 8 ಮಹಿಳೆಯರು ಇಂದು ಸೋಂಕಿತರಾಗಿದ್ದು, ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ವೈದ್ಯರೂ ಸೇರಿದಂತೆ ಇವರೆಲ್ಲರೂ ಮುಂಬೈನಿಂದ ವಾಪಸ್ಸಾದವರಾಗಿದ್ದು, ವೈದ್ಯರ ಸಂಪರ್ಕ ದಲ್ಲಿದ್ದ ಒಂದೇ ಕುಟುಂಬದ 13 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಬೆಂಗಳೂರು, ತುಮಕೂರು, ರಾಯಚೂರಿನಲ್ಲಿ ತಲಾ 4, ಬೀದರ್‍ನಲ್ಲಿ 10, ಕಲಬುರಗಿಯಲ್ಲಿ 7, ಉಡುಪಿಯಲ್ಲಿ 6, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಯಾದಗಿರಿಯಲ್ಲಿ ತಲಾ ಇಬ್ಬರು ಸೇರಿ ರಾಜ್ಯದಲ್ಲಿ 67 ಮಂದಿಗೆ ಇಂದು ಸೋಂಕು ಪತ್ತೆಯಾಗಿದ್ದು, ರಾಜ್ಯದ 1462 ಸೋಂಕಿತರ ಪೈಕಿ 556 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 41 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ 864 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Translate »