ಕೊರೊನಾದಿಂದ ಗುಣಮುಖರಾಗಿ ರೋಡ್ ಶೋ ನಡೆಸಿದ ಬಿಬಿಎಂಪಿ ಕಾರ್ಪೊರೇಟರ್ ಇಮ್ರಾನ್ ಪಾಷ ಬಂಧನ
ಮೈಸೂರು

ಕೊರೊನಾದಿಂದ ಗುಣಮುಖರಾಗಿ ರೋಡ್ ಶೋ ನಡೆಸಿದ ಬಿಬಿಎಂಪಿ ಕಾರ್ಪೊರೇಟರ್ ಇಮ್ರಾನ್ ಪಾಷ ಬಂಧನ

June 8, 2020

ಬೆಂಗಳೂರು, ಜೂ.7-ಕೊರೊನಾ ಸೋಂಕಿನಿಂದ ಗುಣಮುಖ ರಾಗಿ ಭಾನುವಾರ ಡಿಸ್ಚಾರ್ಜ್ ಆದ ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸಂಭ್ರಮಾಚರಣೆ ಮಾಡಿದ ಪಾದರಾಯನ ಪುರ ಕಾರ್ಪೊರೇಟರ್ ಇಮ್ರಾನ್ ಪಾಷ ಅವರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಇಮ್ರಾನ್ ಪಾಷ ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಡಾ. ರಾಜಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆರೆದ ವಾಹನದಲ್ಲಿ ರೋಡ್ ಶೋ ಆರಂಭಿಸಿದರು. ವಾಹನದ ಮುಂದೆ ಬೈಕ್‍ಗಳಲ್ಲಿ ಜಾಥಾ ನಡೆಸಿ, ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರ ಮಿಸಿದರು. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಹೂಮಳೆ ಸುರಿಸಿ, ಜೈಕಾರ ಹಾಕುತ್ತಿದ್ದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಜೆ ಜೆ ನಗರ ಠಾಣೆ ಪೊಲೀಸರು ಕಾರ್ಪೊರೇಟರ್ ಮತ್ತು ಅವರ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾದ ಪರಿಸ್ಥಿತಿಯೂ ನಿರ್ಮಾಣವಾಯಿತು. ಕೊನೆಗೆ ತೆರೆದ ಕಾರಿನಲ್ಲಿ ರೋಡ್ ಶೋ ನಡೆಸುತ್ತಿದ್ದ ಇಮ್ರಾನ್ ಪಾಷ ಅವರನ್ನು ಪೊಲೀಸರು ಬಂಧಿಸಿ ಕಾಲ್ನಡಿಗೆಯಲ್ಲೇ ಠಾಣೆಗೆ ಕರೆದೊಯ್ದರು. ನಂತರ ಗುಂಪನ್ನು ಚದುರಿಸಿದರು. ಈಗ ಪಾದರಾಯನಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಮ್ರಾನ್ ಪಾಷ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಪೊಲೀಸರು, ವಿಕ್ಟೋರಿಯಾ ಆಸ್ಪತ್ರೆಯ ಜೈಲ್ ವಾರ್ಡ್‍ನಲ್ಲಿ ಅವರನ್ನು ಇರಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ್ದ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಸುದ್ದಿಗಾರರ ಜೊತೆ ಮಾತನಾಡಿ, ಹಾಟ್‍ಸ್ಪಾಟ್ ಆಗಿರುವ ಪ್ರದೇಶದಲ್ಲಿ ಮೆರವಣಿಗೆ ನಡೆಸಿರುವುದು ಬೇಜವಾಬ್ದಾರಿತನವಾಗಿದೆ. ಇದೊಂದು ಕ್ರಿಮಿನಲ್ ಅಪರಾಧವಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ತಿಳಿಸಿದರು.

ಜಮೀರ್ ಗರಂ: ಸೋಂಕಿನಿಂದ ಗುಣಮುಖನಾಗಿ ಪಾದರಾಯನಪುರಕ್ಕೆ ವಾಪಸ್ಸಾದ ಕಾರ್ಪೊರೇಟರ್ ಇಮ್ರಾನ್ ಪಾಷ ವರ್ತನೆಗೆ ಶಾಸಕ ಜಮೀರ್ ಅಹಮದ್ ಗರಂ ಆಗಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, `ರಾಜ್ಯಕ್ಕೆ ರಾಜ್ಯವೇ ಕೊರೊನಾದಿಂದ ಕಂಗಾಲಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಜನರನ್ನು ಗುಂಪುಗೂಡಿಸಿ ಮೆರವಣಿಗೆ ಮಾಡುವುದು ಬೇಜವಾಬ್ದಾರಿ ನಡವಳಿಕೆ ಆಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ತಿಳಿಸಬೇಕಾದವರೇ ಈ ರೀತಿ ವರ್ತಿಸಿದರೆ ಹ್ಯಾಗೆ?’ ಎಂದು ಟ್ವೀಟ್ ಮಾಡಿದ್ದಾರೆ.

Translate »