ನಾಗಮಂಗಲ ಬಳಿ ಕಲ್ಲು ಬಂಡೆ ಸ್ಫೋಟ
ಮೈಸೂರು

ನಾಗಮಂಗಲ ಬಳಿ ಕಲ್ಲು ಬಂಡೆ ಸ್ಫೋಟ

June 8, 2020

ಮಂಡ್ಯ, ಜೂ.7- ಕೂದಲೆಳೆ ಅಂತರದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಭಾರೀ ಅಪಾಯದಿಂದ ಪಾರಾಗಿದ್ದಾರೆ. ನಾಗಮಂಗಲದ ಬಂಕಾಪುರದ ಬಳಿ ಸಚಿವರು ಕಾರಿನಲ್ಲಿ ಬರುತ್ತಿದ್ದ ವೇಳೆ ರಸ್ತೆ ಬದಿ ಕಲ್ಲುಬಂಡೆ ಸ್ಫೋಟ ಗೊಳಿಸಿದ್ದು, ಸ್ವಲ್ಪದರಲ್ಲಿಯೇ ಅಪಾಯ ತಪ್ಪಿದೆ.

ನಾಗಮಂಗಲದ ಬಂಕಾಪುರ ಬಳಿ ಬೆಂಗಳೂರು ಜಲಸೂರು ರಸ್ತೆಗಾಗಿ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಸ್ಥಳದಲ್ಲಿ ಅಡ್ಡಬಂದ ಕಲ್ಲು ಬಂಡೆಯನ್ನು ಹಗಲು ವೇಳೆಯೇ ಸ್ಫೋಟಗೊಳಿಸಲಾಗಿದೆ. ಸಚಿವರು ಕೆ.ಆರ್.ಪೇಟೆಗೆ ಬರುತ್ತಿದ್ದ ಸಮಯದಲ್ಲಿಯೇ ಕಲ್ಲು ಬಂಡೆಯನ್ನು ಗುತ್ತಿಗೆದಾರ ಸ್ಫೋಟಗೊಳಿಸಿದ್ದಾನೆ.

ಕಲ್ಲು ಬಂಡೆ ಸ್ಫೋಟಗೊಳಿಸುವಾಗ ರಸ್ತೆ ಸಂಚಾರವನ್ನು ಬಂದ್ ಮಾಡಿಸಿಲ್ಲ. ಮುಂಜಾಗೃತಾ ಕ್ರಮ ತೆಗೆದುಕೊಳ್ಳದೆ ಕಲ್ಲುಬಂಡೆ ಸ್ಫೋಟಗೊಳಿಸಲಾಗಿದೆ. ಗುತ್ತಿಗೆ ದಾರನ ಬೇಜವಾಬ್ದಾರಿಗೆ ಸಚಿವ ಕೆ.ಸಿ.ನಾರಾಯಣಗೌದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಜವಾಬ್ದಾರಿ ತೋರಿದ ಗುತ್ತಿಗೆದಾರನನ್ನು ತಕ್ಷಣವೇ ವಶಕ್ಕೆ ಪಡೆಯುವಂತೆ ಸಚಿವ ನಾರಾಯಣಗೌಡ ಸೂಚಿಸಿದ್ದು, ಸಚಿವರ ಸೂಚನೆ ಮೇರೆಗೆ ಗುತ್ತಿಗೆದಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಶಿಫ್ ರಸ್ತೆ ಕಾಮಗಾರಿ ನಡೆಸುತ್ತಿದ್ದ ಮೈಸೂರಿನ ಗುತ್ತಿಗೆದಾರ ಶ್ರೀನಿವಾಸ್‍ರಾಜ್‍ನನ್ನು ವಶಕ್ಕೆ ಪಡೆಯಲಾಗಿದೆ.

Translate »