ಹಳ್ಳಿ ಜನರಲ್ಲಿ ಆರೋಗ್ಯ, ಶಿಕ್ಷಣ, ಸ್ವಚ್ಛತೆ  ಜಾಗೃತಿಗೆ ಎನ್‍ಎಸ್‍ಎಸ್ ಶ್ರಮಿಸಲಿ
ಮೈಸೂರು

ಹಳ್ಳಿ ಜನರಲ್ಲಿ ಆರೋಗ್ಯ, ಶಿಕ್ಷಣ, ಸ್ವಚ್ಛತೆ ಜಾಗೃತಿಗೆ ಎನ್‍ಎಸ್‍ಎಸ್ ಶ್ರಮಿಸಲಿ

March 17, 2021

ಮೈಸೂರು, ಮಾ.16(ಎಸ್‍ಪಿಎನ್)- ಮೈಸೂರು ವಿವಿ ವ್ಯಾಪ್ತಿಯ ಎಲ್ಲಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್‍ಎಸ್‍ಎಸ್) ಘಟಕಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ, ಶಿಕ್ಷಣ, ಸಾಮಾಜಿಕ ವ್ಯವಸ್ಥೆ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸಲಹೆ ನೀಡಿದರು.

ಮೈವಿವಿ ಎನ್‍ಎಸ್‍ಎಸ್-ಎಂ ಪ್ಯಾನಲ್ಡ್ ಟ್ರೈನಿಂಗ್ ಇನ್‍ಸ್ಟಿಟ್ಯೂಷನ್(ಇಟಿಐ) ಎನ್‍ಎಸ್‍ಎಸ್ ಸಂಯೋಜ ನಾಧಿಕಾರಿಗಳ 4 ಮತ್ತು 5ನೇ ತಂಡದ ತರಬೇತಿ ಕಾರ್ಯ ಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಮೈವಿವಿ ವ್ಯಾಪ್ತಿ ಕಾಲೇಜುಗಳ ಎನ್‍ಎಸ್‍ಎಸ್ ವಿದ್ಯಾರ್ಥಿ ಗಳು ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಇಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಹಳ್ಳಿಗಳನ್ನು ಸುಧಾರಣೆ ಮಾಡುಬಹುದು. ಹಾಗಾಗಿ ಮೈವಿವಿ ವ್ಯಾಪ್ತಿಯ ಎನ್‍ಎಸ್‍ಎಸ್ ಘಟಕಗಳ ಕಾರ್ಯ ವೈಖರಿ ಬದಲಿಸುವ ಬಗ್ಗೆ ಗಂಭೀರ ಚಿಂತನೆ ಮಾಡ ಬೇಕು ಎಂದು ಸಲಹೆ ನೀಡಿದರು.

ನಗರದ ಜನತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸ್ವಚ್ಛತೆ ಬಗ್ಗೆ ಅರಿವಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಹಾಗಾಗಿ ವಿವಿ ವ್ಯಾಪ್ತಿ ವಿದ್ಯಾರ್ಥಿಗಳು ಎನ್‍ಎಸ್‍ಎಸ್ ಮೂಲಕ ಹಳ್ಳಿಗಳಿಗೆ ತೆರಳಿ ಅಲ್ಲಿ ಕೆಲಸ ಮಾಡಬೇಕು. ಇದಕ್ಕೆ ಆಯಾ ಕಾಲೇಜು ಎನ್‍ಎಸ್‍ಎಸ್ ಘಟಕ ಸಂಯೋಜನಾಧಿಕಾರಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

`ನಾನು ಶಾರದಾ ವಿಲಾಸ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿ ದ್ದಾಗ ಎನ್‍ಎಸ್‍ಎಸ್ ಘಟಕದಲ್ಲಿ ತೊಡಗಿಸಿಕೊಂಡ ಹೆಮ್ಮೆಯಿದೆ. ನಂತರ ಮಾನಸ ಗಂಗೋತ್ರಿಯಲ್ಲಿ ಎಂಎಸ್‍ಸಿ ವ್ಯಾಸಂಗ ಕಾಲದಲ್ಲೂ ಎನ್‍ಎಸ್‍ಎಸ್‍ನಲ್ಲಿ ತೊಡಗಿಸಿ ಕೊಂಡಿದ್ದು ಇಂದಿಗೂ ಹೆಮ್ಮೆ ಎನಿಸುತ್ತಿದೆ. ಹಾಗಾಗಿ ಇಂದಿನ ವಿದ್ಯಾರ್ಥಿಗಳು ಸಾಮಾಜಿಕ ಜೀವನದಲ್ಲಿ ಸೇವಾ ಮನೋಭಾವ ಬೆಳಸಿಕೊಳ್ಳಬೇಕಾದರೆ ಎನ್‍ಎಸ್‍ಎಸ್‍ನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

40 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್, ದೂರವಾಣಿ ಲಭ್ಯವಿರಲಿಲ್ಲ. ಈಗ ಹಳ್ಳಿಗಾಡಿನಲ್ಲಿ ಪ್ರತಿ ಯೊಬ್ಬರಲ್ಲೂ ಮೊಬೈಲ್ ಇರುವುದರಿಂದ ಎಲ್ಲಾ ಮಾಹಿತಿ ಕ್ಷಣಾರ್ಧದಲ್ಲಿ ಪಡೆಯುತ್ತಾರೆ. ಹಾಗಾಗಿ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಎನ್‍ಎಸ್‍ಎಸ್ ಕಾರ್ಯ ಸ್ವರೂಪವನ್ನು ಬದಲಿಸಿ ಕೊಳ್ಳುವಂತೆ ಮನವಿ ಮಾಡಿದರು. ಮೈವಿವಿ ಎನ್‍ಎಸ್‍ಎಸ್ ಘಟಕ ಸಂಯೋಜನಾಧಿಕಾರಿ ಪ್ರೊ.ಬಿ.ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಎಂ.ಬಿ.ಸುರೇಶ್, ಎನ್‍ಎಸ್‍ಎಸ್ ಕೋರ್ಸ್ ಕೋ-ಆರ್ಡಿನೇಟರ್ ಪ್ರೊ. ಬಿ.ಕೆ. ಚಿಕ್ಕಕೆಂಪೇಗೌಡ, ಕಾರ್ಯಕ್ರಮಾಧಿಕಾರಿ ಪ್ರೊ. ಬಾಹು ಬಲಿ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

Translate »