ಮೈಸೂರಲ್ಲಿ ಮತ್ತೆರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದಿನಿಂದ ಆರೋಗ್ಯ ಸೇವೆ ಆರಂಭ
ಮೈಸೂರು

ಮೈಸೂರಲ್ಲಿ ಮತ್ತೆರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದಿನಿಂದ ಆರೋಗ್ಯ ಸೇವೆ ಆರಂಭ

February 6, 2023

ಮೈಸೂರು,ಫೆ.5- ಮೈಸೂರಿನ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸೋಮವಾರ (ಫೆ.6)ದಿಂದ ಎರಡೂ ನೂತನ ಆಸ್ಪತ್ರೆಗಳು ಆರೋಗ್ಯ ಸೇವೆ ಆರಂಭಿಸಲಿದ್ದು, ಕೆ.ಆರ್.ಎಸ್ ರಸ್ತೆಯಲ್ಲಿರುವ ಮಹಾರಾಜಕುಮಾರಿ ಕೃಷ್ಣಾಜಮ್ಮಣ್ಣಿ ಸೂಪರ್ ಸ್ಪೆಷಾ ಲಿಟಿ ಆಸ್ಪತ್ರೆ ಓಪಿಡಿ ಸೇವೆ ಹಾಗೂ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಆಪರೇಷನ್ ಮತ್ತು ಒಳರೋಗಿ ಸೇವೆ ಆರಂಭಿಸಲಾಗುತ್ತಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ದುರಸ್ತಿ ಕಾಮಗಾರಿ ಕೆಲವೇ ಕೆಲವು ದಿನಗಳಲ್ಲಿ ಆರಂಭ ವಾಗಲಿದ್ದು, ಅದಕ್ಕಾಗಿ ಕೆ.ಆರ್.ಆಸ್ಪತ್ರೆಯ ಕೆಲವು ವಿಭಾಗಗಳ ಮೇಲೆ ಉಂಟಾಗುತ್ತಿರುವ ಒತ್ತಡ ನಿವಾ ರಿಸಲು ಹಾಗೂ ತಪಾಸಣೆಗೆ ಬರುವ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸಲು  ಹೊಸ ಆಸ್ಪತ್ರೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್-19 ಮೊದಲ ಹಾಗೂ 2ನೇ ಅಲೆ ವೇಳೆ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ಕಟ್ಟಡಗಳು ಕೆಲವು ತಿಂಗಳಿಂದ ಯಾವುದೇ ಚಟುವಟಿಕೆ ಇಲ್ಲದ ಸ್ತಬ್ಧವಾಗಿದ್ದವು. ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗಿರುವ ಹೊಸ ಆಸ್ಪತ್ರೆಗಳ ನೂತನ ಕಟ್ಟಡದಲ್ಲಿ ಆರೋಗ್ಯ ಸೇವೆ ಆರಂಭಿಸು ತ್ತಿರುವುದರಿಂದ ಮೈಸೂರಿನ ಜನತೆಗೆ ಆರೋಗ್ಯ ಸೇವೆ ಪಡೆದುಕೊಳ್ಳಲು ಸಹಕಾರಿಯಾಗಲಿದೆ.

ಭರದಿಂದ ಸಾಗಿದ ಸಿದ್ಧತೆ: ಕಳೆದ ನಾಲ್ಕೈದು ತಿಂಗಳಿಂದ ಬೀಗ ಹಾಕಿದ ಸ್ಥಿತಿಯಲ್ಲಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ಕಟ್ಟಡಗಳಲ್ಲಿ ಕಳೆದ 2 ದಿನ ಗಳಿಂದ ಅಗತ್ಯ ಸಿದ್ದತೆ ಮಾಡಿ ಕೊಳ್ಳಲಾಗುತ್ತಿದೆ. ಎರಡೂ ಹೊಸ ಕಟ್ಟಡಗಳಾಗಿದ್ದರೂ ಬಳಕೆಯಾಗದ ಹಿನ್ನೆಲೆಯಲ್ಲಿ ದೂಳು ತುಂಬಿಕೊಂಡಿದೆ. ಆಸ್ಪತ್ರೆಯ ಕಟ್ಟಡದಲ್ಲಿರುವ ದೂಳನ್ನು ಸ್ವಚ್ಛಗೊಳಿಸಿ, ತಪಾ ಸಣೆಗೆಂದು ಬರುವ ರೋಗಿ ಗಳಿಗೆ ಕುಳಿತುಕೊಳ್ಳಲು ಆಸನ, ಹೆಸರು, ವಿಳಾಸ ನಮೂದು ಮಾಡಿಕೊಳ್ಳಲು ಕೌಂಟರ್, ಕುಡಿಯುವ ನೀರು, ವಾರ್ಡ್ ಗಳಿಗೆ ಆಮ್ಲಜನಕ ಪೂರೈಕೆ. ವಿದ್ಯುತ್ ಸರಬರಾಜು ವ್ಯವಸ್ಥೆ, ಜನರೇಟರ್ ವ್ಯವಸ್ಥೆ, ವಿವಿಧ ವಿಭಾಗಗಳ ತಪಾಸಣಾ ಕೊಠಡಿಗಳ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಎರಡೂ ಹೊಸ ಆಸ್ಪತ್ರೆಗಳು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಎಂಎಂಸಿಆರ್‍ಐ)ಆಡಳಿತದ ಅಧೀನದಲ್ಲಿ ಬರುವುದರಿಂದ ನಾಳೆಯಿಂದ ಆರೋಗ್ಯ ಸೇವೆ ಆರಂಭಿಸಲು ಎಂಎಂಸಿಆರ್‍ಐ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ.

ಯಾವೆಲ್ಲಾ ಸೇವೆ ಲಭ್ಯ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ.6ರಿಂದ ಪ್ಲಾಸ್ಟಿಕ್ ಸರ್ಜರಿ, ಮೂಳೆಚಿಕಿತ್ಸೆ(ಆರ್ಥೋಪೆಡಿಕ್), ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗ(ಪೀಡಿಯಾಟ್ರಿಕ್ಸ್), ನರವಿಜ್ಞಾನ(ನ್ಯೂರಾಲಜಿ), ನರ-ಶಸ್ತ್ರಚಿಕಿತ್ಸೆ(ನ್ಯೂರೋ ಸರ್ಜರಿ), ಮೂತ್ರಶಾಸ್ತ್ರ, ನೆಫ್ರಾಲಜಿ, ಗ್ಯಾಸ್ಟ್ರೋ-ಎಂಟರಾಲಜಿ, ಮೆಡಿಕಲ್ ಆಂಕಾಲಜಿ, ಸರ್ಜಿಕಲ್ ಆಂಕಾಲಜಿ ವಿಭಾಗದ ಹೊರರೋಗಿ ವಿಭಾಗ ಕಾರ್ಯಾರಂಭ ಮಾಡಲಾಗುತ್ತಿದೆ. 130 ಹಾಸಿಗೆ ಸೌಲಭ್ಯವಿರುವ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಶಸ್ತ್ರಚಿಕಿತ್ಸೆ ವಿಭಾಗ ಹಾಗೂ ಒಳರೋಗಿ ವಿಭಾಗ ಕಾರ್ಯಾರಂಭ ಮಾಡಲಿದೆ. ಈ ಹೊಸ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಆರಂಭಿ ಸಲು ಅಗತ್ಯವಾಗಿರುವ ಪ್ರಯೋಗಾಲಯದ ಉಪಕರಣ ಹಾಗೂ ಇನ್ನಿತರ ಸೌಲಭ್ಯ ವನ್ನು ಪಿಕೆಟಿಬಿ ಹಾಗೂ ಸಿಡಿ ಆಸ್ಪತ್ರೆಯಿಂದ ಸೌಲಭ್ಯ ಪಡೆದುಕೊಳ್ಳಲು ನಿರ್ಧರಿಸಲಾ ಗಿದೆ. ಹೊರರೋಗಿ ವಿಭಾಗವು ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಕಾರ್ಯ ನಿರ್ವಹಿಸುತ್ತವೆ. ಹಂತ ಹಂತವಾಗಿ ಸೇವಾ ಅವಧಿಯನ್ನು ವಿಸ್ತರಿಸಲು ಚಿಂತಿಸಲಾಗಿದೆ.

134 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿ ಮೈಸೂರು ರಾಜಮನೆತನದ ರಾಜಕುಮಾರಿ ಕೃಷ್ಣಾಜಮ್ಮಣ್ಣಿ ಅವರಿಗೆ ಸಮರ್ಪಿಸ ಲಾಗಿದೆ. ಈ ಆಸ್ಪತ್ರೆಯಲ್ಲಿ 250 ಹಾಸಿಗೆ ಸೌಲಭ್ಯವಿದೆ. ಕಟ್ಟಡವು ಮೂರು ಮಹಡಿ ಯನ್ನು ಹೊಂದಿದೆ. ಪ್ರತಿಯೊಂದು ಮಹಡಿಯಲ್ಲಿಯೂ ವಾರ್ಡ್ ಹಾಗೂ ತಪಾಸಣಾ ಕೊಠಡಿಗಳಿವೆ. 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಟ್ರಾಮಾ ಕೇರ್ ಸೆಂಟರ್‍ನಲ್ಲಿ 135 ಹಾಸಿಗೆ ಸೌಲಭ್ಯವಿರುವ ವಾರ್ಡ್‍ಗಳಿವೆ. ಅಲ್ಲದೆ, ಈ ಕಟ್ಟಡದಲ್ಲೂ ವೈದ್ಯಕೀಯ ತಪಾಸಣಾ ಕೊಠಡಿಗಳಿವೆ. ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಅಂದಾಜು ಅಪಘಾತಕ್ಕೆ ಒಳಗಾದ 1,500 ಮಂದಿ ದಾಖಲಾಗುತ್ತಾರೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳಿಂದಲೂ ರಸ್ತೆ ಅಪಘಾತ ಸಂತ್ರಸ್ತರು ಕೆ.ಆರ್.ಆಸ್ಪತ್ರೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಸ್ತೆ ಅಪಘಾತದಿಂದ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಕೆ.ಆರ್.ಆಸ್ಪತ್ರೆಯೊಂದಿಗೆ ಟ್ರಾಮಾ ಕೇರ್ ಸೆಂಟರ್ ಸೇವೆ ಸಹಕಾರಿಯಾಗಲಿದೆ. ಆಮ್ಲಜನಕ ಸರಬರಾಜು ವ್ಯವಸ್ಥೆಯಿರುವ ಹಾಸಿಗೆ, ವೆಂಟಿಲೇ ಟರ್ ಸೌಲಭ್ಯ ಇರುವುದರಿಂದ ಆರೋಗ್ಯ ಸೇವೆ ಇನ್ನಷ್ಟಿ ಸಂತ್ರಸ್ತರಿಗೆ ದೊರೆಯಲಿದೆ.

Translate »