ಮೈಸೂರು ಮಹಾರಾಜರು ನಿರ್ಮಿಸಿದ ಹೊಯ್ಸಳ ಶಿಲ್ಪಕಲೆಯ ಮನಮೋಹಕ ವೇಣುಗೋಪಾಲ ಸ್ವಾಮಿ
ಮೈಸೂರು

ಮೈಸೂರು ಮಹಾರಾಜರು ನಿರ್ಮಿಸಿದ ಹೊಯ್ಸಳ ಶಿಲ್ಪಕಲೆಯ ಮನಮೋಹಕ ವೇಣುಗೋಪಾಲ ಸ್ವಾಮಿ

February 6, 2023

ಮೈಸೂರು, ಫೆ.5-ಕನ್ನಂಬಾಡಿ ಅಣೆಕಟ್ಟಿನ (ಕೆಆರ್‍ಎಸ್) ಹಿನ್ನೀರಿನ ಹೊಸ ಕನ್ನಂಬಾಡಿಯಲ್ಲಿರುವ ಪುರಾತನ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಹೊರ ಜಿಲ್ಲೆಗಳಿಂದ ಮಾತ್ರವಲ್ಲದೇ, ಹೊರ ರಾಜ್ಯಗಳಿಂದಲೂ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಾರೆ. ದೇವಸ್ಥಾನದ ವಿಹಂಗಮ ನೋಟವನ್ನು ಕಣ್ತುಂಬಿಕೊಂಡು ಹರ್ಷಚಿತ್ತರಾಗುವ ಪ್ರವಾಸಿಗರು, ಅಲ್ಲಿಗೆ ತಲುಪುವಷ್ಟರಲ್ಲಿ ನರಕಯಾತನೆ ಪಡುವಂತಾಗಿದೆ.

ದೇವಸ್ಥಾನದಿಂದ ಸುಮಾರು 2 ಕಿ.ಮೀ. ರಸ್ತೆಯು ತೀವ್ರ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ನಾಲ್ಕು ಚಕ್ರ ವಾಹನಗಳಲ್ಲಿ ತೆರಳುವವರು ಮೈ-ಕೈ ನೋವು ಮಾಡಿಕೊಂಡರೆ, ದ್ವಿಚಕ್ರ ವಾಹನದಲ್ಲಿ ತೆರಳುವವರು ಕೆಲವೊಮ್ಮೆ ಆಯತಪ್ಪಿ ಬಿದ್ದು ಸಣ್ಣಪುಟ್ಟ ಗಾಯ ಗಳಾದದ್ದೂ ಉಂಟು. ಅಷ್ಟರ ಮಟ್ಟಿಗೆ ರಸ್ತೆ ಹದಗೆಟ್ಟಿದೆ. ಈ ರಸ್ತೆಗೆ ಈವರೆವಿಗೂ ಡಾಂಬರೀಕರಣವೇ ಮಾಡಿಲ್ಲವೇನೋ ಎಂಬಂತೆ ಭಾಸವಾಗುತ್ತಿದೆ. ವಾಹನ ಸಂಚರಿ ಸಲು ಯೋಗ್ಯವಾದ ಮಣ್ಣು ರಸ್ತೆಯಾದರೂ ಇದೆಯೇ ಎಂದರೆ, ಅದೂ ಇಲ್ಲ. ಹಳ್ಳ-ಕೊಳ್ಳಗಳಿಂದ ಕೂಡಿರುವ ಈ ರಸ್ತೆ ನರಕಕ್ಕೆ ದಾರಿ ತೋರಿಸುವಂತಹ ರಸ್ತೆಯೆಂದು ಕೆಲವರು ಅತೀ ಬೇಸರದಿಂದ ನುಡಿಯುತ್ತಾರೆ.

ಅಂದ ಹಾಗೆ ಪ್ರಸಿದ್ಧ ವೇಣುಗೋಪಾಲ ಸ್ವಾಮಿ ದೇವಸ್ಥಾನವನ್ನು 12ನೇ ಶತಮಾನ ದಲ್ಲಿ ಮೈಸೂರು ಮಹಾರಾಜರು ಹೊಯ್ಸಳ ವಾಸ್ತುಶಿಲ್ಪದೊಂದಿಗೆ ಅದ್ಭುತವಾಗಿ ನಿರ್ಮಿಸಿದ್ದರು. ಅಲ್ಲಿನ ಶಿಲ್ಪ ಕಲೆಗೆ ಎಲ್ಲರೂ ಮಾರುಹೋಗಿ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಆದರೆ 1909ರಲ್ಲಿ ಕನ್ನಂಬಾಡಿ ಅಣೆಕಟ್ಟೆ ನಿರ್ಮಾಣವಾದಾಗ ಈ ದೇವಸ್ಥಾನ ಸಂಪೂರ್ಣವಾಗಿ ಮುಳು ಗಡೆಯಾಗಿದ್ದು, 2000ನೇ ವರ್ಷದಲ್ಲಿ ತೀವ್ರ ಬರಗಾಲದಿಂದ ಕೆಆರ್‍ಎಸ್ ಬರಿದಾದಾಗ ದೇವಸ್ಥಾನ ಗೋಚರಿಸಿತು.

ಇದನ್ನು ಗಮನಿಸಿದ ಖೋಡೆ ಫೌಂಡೇಷನ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ್ದ, ಅದೇ ರೀತಿ ಒಂದಿಂಚೂ ಕೂಡ ಬದಲಾಗದಂತೆ ದೇವಸ್ಥಾನವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಜೀರ್ಣೋದ್ಧಾರ ಮಾಡಿದ್ದರು. ಈ ಕಾಮಗಾರಿ 2011ರಲ್ಲಿ ಪೂರ್ಣ ಗೊಂಡಿದ್ದು, ಅಂದಿನಿಂದ ದೇವಸ್ಥಾನದ ಉಸ್ತುವಾರಿಯನ್ನು ಖೋಡೆ ಫೌಂಡೇಷನ್‍ನವರು ವಹಿಸಿಕೊಂಡು ನಿರ್ವಹಣೆ ಮಾಡುತ್ತಿದ್ದಾರೆ. ಅರ್ಚಕರನ್ನು ನೇಮಿಸಿದ್ದು ಮಾತ್ರವಲ್ಲದೇ, ಪುರುಷ ಹಾಗೂ ಮಹಿಳಾ ಕಾವಲುಗಾರರನ್ನೂ ಕೂಡ ನೇಮಕ ಮಾಡಿದ್ದಾರೆ. ವಿಶೇಷವೆಂದರೆ ಈ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಇಟ್ಟಿಲ್ಲ. ದೇವಸ್ಥಾನದ ಎಲ್ಲಾ ಖರ್ಚು-ವೆಚ್ಚಗಳನ್ನು ಖೋಡೆ ಫೌಂಡೇಷನ್‍ನವರೇ ಭರಿಸುತ್ತಿದ್ದಾರೆ.

ವಿಪರ್ಯಾಸವೆಂದರೆ ಈ ದೇವಸ್ಥಾನ ತಲುಪಲು 2 ಕಿ.ಮೀ. ದುಸ್ತರ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಪ್ರವಾ ಸಿಗರದ್ದಾಗಿದೆ. ಈ ರಸ್ತೆಯು ಕಟ್ಟೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟಿದ್ದು, ರಜೆ ದಿನಗಳಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದರೂ, ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂಬ ಗೋಜಿಗೆ ಗ್ರಾಮ ಪಂಚಾಯ್ತಿ ಹೋಗಿಲ್ಲ. ಸಂಪೂರ್ಣವಾಗಿ ರಸ್ತೆ ಅಭಿವೃದ್ಧಿ ಪಡಿಸುವುದು ಒತ್ತಟ್ಟಿಗಿರಲಿ, ಕನಿಷ್ಠ ಪಕ್ಷ ವಾಹನ ಸಂಚರಿಸುವಷ್ಟಾದರೂ ರಸ್ತೆ ದುರಸ್ತಿಪಡಿಸಬೇಕೆಂಬ ವಿವೇಚನೆಯೂ ಕೂಡ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಗೆ ಇಲ್ಲದಂತಾಗಿದೆ ಎಂಬ ಆರೋಪಗಳು ಪ್ರವಾಸಿಗರಿಂದ ಕೇಳಿಬಂದಿವೆ.

ರಜೆ ದಿನಗಳಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರಾದರೂ, ಅಲ್ಲಿರುವುದು ಕೇವಲ ಎರಡೇ ಶೌಚಾಲಯ ಗಳು. ಇಲ್ಲಿಗೆ ಮತ್ತಷ್ಟು ಶೌಚಾಲಯಗಳನ್ನು ನಿರ್ಮಿಸಬೇಕಾದ ಅಗತ್ಯತೆ ಇದೆ. ದೇವ ಸ್ಥಾನವು ಸಂಜೆ 6.30ರವರೆಗೆ ತೆರೆದಿರುತ್ತದೆ. ಆದರೆ ಶೌಚಾಲಯಗಳನ್ನು 5.30ಕ್ಕೆ ಬಂದ್ ಮಾಡಲಾಗುತ್ತದೆ. ಕನಿಷ್ಠ ಪಕ್ಷ ದೇವಸ್ಥಾನ ಮುಚ್ಚುವವರೆಗಾದರೂ, ಶೌಚಾಲಯ ಬಂದ್ ಮಾಡದಂತೆ ಪ್ರವಾಸಿಗರು ಆಗ್ರಹಿಸಿದ್ದಾರೆ.

ಈ ಕುರಿತು ಕಟ್ಟೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹೇಶ್ ಅವರನ್ನು `ಮೈಸೂರು ಮಿತ್ರ’ ಸಂಪರ್ಕಿಸಲಾಗಿ ಅವರು, ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾ ಗಿದ್ದಾಗ ಈ ರಸ್ತೆ ಅಭಿವೃದ್ಧಿಗೆ 60 ಲಕ್ಷ ರೂ. ಮಂಜೂರಾಗಿತ್ತು. ಸರ್ಕಾರ ಬದಲಾವಣೆ ಯಾದ ನಂತರ ಆ ಹಣ ಬಂದಿಲ್ಲ. ಇದೀಗ ರಸ್ತೆ ದುರಸ್ತಿಗೆ ನಾಲ್ಕೂವರೆ ಲಕ್ಷ ರೂ. ಮಂಜೂರಾಗಿದ್ದು, ಸದ್ಯದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ ಎಂದರು.

ಪ್ರಸಿದ್ಧ ದೇವಾಲಯವು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದ್ದಾಗ ನಮ್ಮ ಸರ್ಕಾರ ಅದರತ್ತ ಗಮನವನ್ನೇ ಹರಿಸಿರಲಿಲ್ಲ. ಆದರೆ ಖೋಡೆ ಫೌಂಡೇಷನ್‍ನವರು ಪ್ರಾಚ್ಯವಸ್ತು ಇಲಾಖೆಯ ಸಹಕಾರವನ್ನು ಪಡೆದು ಕೋಟ್ಯಾಂತರ ರೂ. ವೆಚ್ಚ ಮಾಡಿ ಕೇವಲ ದೇವಸ್ಥಾನವನ್ನು ಯಥಾವತ್ತಾಗಿ ಸ್ಥಳಾಂತರಿಸುವ ಜೊತೆಗೆ ಈಗಲೂ ಕೂಡ ಅವರದೇ ವೆಚ್ಚದಲ್ಲಿ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಅಲ್ಲಿನ ಅರ್ಚಕರಿಗೆ ಹಾಗೂ ಭದ್ರತಾ ಸಿಬ್ಬಂದಿಗೆ ಸಂಬಳವನ್ನೂ ಕೊಡುತ್ತಿದ್ದಾರೆ. ಒಂದು ಫೌಂಡೇಷನ್ ಇಷ್ಟೆಲ್ಲಾ ಮಾಡಿದ್ದರೂ ಅಲ್ಲಿಗೆ ತಲುಪುವ ಕೇವಲ 2 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲು ಈ ಸರ್ಕಾರಕ್ಕೆ ಸಾಧ್ಯವಿಲ್ಲವೇ? ಎಂದು ಪ್ರವಾಸಿಗರೊಬ್ಬರು ಬೇಸರದಿಂದಲೇ ಪ್ರಶ್ನಿಸಿದ್ದಾರೆ. ಈ ಪ್ರಸಿದ್ಧ ದೇವಸ್ಥಾನವು ಸಿ.ಎಸ್.ಪುಟ್ಟರಾಜು ಪ್ರತಿನಿಧಿಸುತ್ತಿರುವ ಪಾಂಡವಪುರ ವಿಧಾನಸಭಾ ಕ್ಷೇತ್ರಕ್ಕೆ ಒಳ ಪಟ್ಟಿದ್ದು, ಶಾಸಕ ಪುಟ್ಟರಾಜು ಅವರು ಇತ್ತ ಗಮನ ಹರಿಸಿ ರಸ್ತೆ ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸಿಗರಿಗೆ ಅನುಕೂಲ ಕಲ್ಪಿಸು ವರೇ ಎಂಬುದನ್ನು ಕಾದು ನೋಡಬೇಕಾಗಿದೆ.

Translate »