ಮೈಸೂರು ಆ.27(ಆರ್‍ಕೆ)-ಭಾರೀ ಪ್ರಮಾಣದ ಗಾಂಜಾ ಸಾಗಿಸುತ್ತಿದ್ದ ಮೈಸೂರಿನ ಇಬ್ಬರು ಸೇರಿದಂತೆ ಮೂವರನ್ನು ಬುಧವಾರ ಸಂಜೆ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಗೌಸಿಯಾನಗರ `ಸಿ’ ಬ್ಲಾಕ್, 8ನೇ ಕ್ರಾಸ್ ನಿವಾಸಿ ಕೈಸರ್ ಪಾಷಾ, ಶಾಂತಿ ನಗರದ ಸಮೀರ್ ಹಾಗೂ ಕೋಲಾರ ಜಿಲ್ಲೆ, ಗೌರಿಬಿದನೂರಿನ ಇಸ್ಮಾಯಿಲ್ ಬಂಧಿತರು. ಅವರಿಂದ 204 ಕೆ.ಜಿ. ಗಾಂಜಾ, ಲಾರಿ, ಕಾರು ಹಾಗೂ 3 ಮೊಬೈಲ್ ಫೋನ್‍ಗಳನ್ನು ಬೆಂಗಳೂರಿನ ಸಿಸಿಬಿಯ ಆಂಟಿನಾ ರ್ಕೋಟಿಕ್ ಘಟಕದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಭಾತ್ಮೀದಾರರು ನೀಡಿದ ಮಾಹಿತಿಯ ಜಾಡು ಹಿಡಿದ ಪೊಲೀ ಸರು ಕಾರ್ಯಾಚರಣೆ ನಡೆಸಿದಾಗ ಬೆಂಗಳೂರಿನ ಹೊರ ವಲಯದ ದೇವನಹಳ್ಳಿ ಬಳಿ ಬುಧವಾರ ಸಂಜೆ ಲಾರಿಯಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಇವರು ಪೊಲೀಸರಿಗೆ ಸಿಕ್ಕಿಬಿದ್ದರು. ಲಾರಿ (ಕೆಎ 51, ಎಬಿ 4233)ಯನ್ನು ಪರಿಶೀಲಿಸಿದಾಗ ಅದರಲ್ಲಿ 204 ಕೆ.ಜಿ. ಗಾಂಜಾ ಸಾಗಣೆ ಮಾಡುತ್ತಿದ್ದುದು ಕಂಡು ಬಂದಿತು. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆ, ತುನಿ ಎಂಬ ಸ್ಥಳದ ಶಿವರೆಡ್ಡಿ ಎಂಬುವನಿಂದ ಖರೀದಿಸಿ ಗಾಂಜಾವನ್ನು ಬೆಂಗಳೂರಿಗೆ ಸಾಗಿಸುತ್ತಿದ್ದರು ಎಂಬುದು ತಿಳಿಯಿತು. ಪ್ರಕರಣದಲ್ಲಿ ಮೈಸೂರಿನ ಕೈಸರ್ ಪಾಷಾ ಪ್ರಮುಖ ಆರೋಪಿಯಾಗಿದ್ದು, ಆತ ಕಳೆದ 6 ತಿಂಗಳಿಂದ ಈ ದಂಧೆ ನಡೆಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರು ಜಿಲ್ಲೆ, ಹುಣಸೂರು, ಪಿರಿಯಾಪಟ್ಟಣ, ಕೊಡಗು ಜಿಲ್ಲೆಯ ಕುಶಾಲನಗರ, ಚಿಕ್ಕಮಗಳೂರು ಜಿಲ್ಲೆ ಹಾಗೂ ಇತರ ಜಿಲ್ಲೆಗಳಲ್ಲೂ ಕೈಸರ್ ಗಾಂಜಾ ಮಾರಾಟಗಾರರೊಂದಿಗೆ ಸಂಪರ್ಕ ಹೊಂದಿರುವುದಲ್ಲದೆ, ತಿಂಗಳಿಗೆ ಕೋಟ್ಯಾಂತರ ರೂ. ಬೆಲೆಬಾಳುವ ಗಾಂಜಾ ಸಾಗಣೆ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
ನಾರ್ಕೋಟಿಕ್ ಕಂಟ್ರೋಲ್ ಬ್ಯುರೋ (ಓಅಃ) ಅಧಿಕಾರಿಗಳ ನೆರವಿನೊಂದಿಗೆ ಕಾರ್ಯಾ ಚರಣೆ ನಡೆಸಿದ ಬೆಂಗಳೂರು ಸಿಸಿಬಿಯ ಆಂಟಿನಾರ್ಕೋಟಿಕ್ ಘಟಕದ ಎಸಿಪಿ ಗೌತಮ್, ಇನ್ಸ್‍ಪೆಕ್ಟರ್‍ಗಳಾದ ಮಹೇಶ ಬೊಳೆತ್ತಿಸ್, ವಿರೂಪಾಕ್ಷ, ಸಿಬ್ಬಂದಿಗಳಾದ ಶಿವಪ್ಪ, ಶಂಭುಲಿಂಗ ಹಾಗೂ ವಿನೋದ ಅವರು ಆರೋಪಿಗಳನ್ನು ಬಂಧಿಸಿ ಕೋಟ್ಯಾಂತರ ರೂ. ಬೆಲೆ ಬಾಳುವ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಮುಖ ಆರೋಪಿ ಕೈಸರ್ ಪಾಷಾ ಕಳೆದ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ 33ನೇ ವಾರ್ಡ್ (ಶಾಂತಿನಗರ)ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‍ನ ಬಷೀರ್ ಅಹ್ಮದ್ ಎದುರು ಸೋತಿದ್ದ. ನಂತರ ಈ ದಂಧೆಗಿಳಿದಿದ್ದ ಕೈಸರ್, ಮೈಸೂರಿನ ಉದಯಗಿರಿ ಠಾಣೆಯಲ್ಲಿ ಆತನ ವಿರುದ್ಧ ಈ ಹಿಂದೆ ಗಾಂಜಾ ಸಾಗಣೆ ಪ್ರಕರಣ ದಾಖಲಾಗಿತ್ತು ಎಂದು ಹೇಳಲಾಗಿದೆ.