ಕೊಡಗಲ್ಲಿ ಮುಂದುವರೆದ ಭಾರೀ ಮಳೆ ಮತ್ತೆ ಹಲವೆಡೆ ಭೂ ಕುಸಿತ,  ಧರೆಗುರುಳಿದ ಮರಗಳು
ಕೊಡಗು

ಕೊಡಗಲ್ಲಿ ಮುಂದುವರೆದ ಭಾರೀ ಮಳೆ ಮತ್ತೆ ಹಲವೆಡೆ ಭೂ ಕುಸಿತ, ಧರೆಗುರುಳಿದ ಮರಗಳು

July 4, 2022

ಮಡಿಕೇರಿ,ಜು.3- ಕೊಡಗುಜಿಲ್ಲೆಯಾದ್ಯಂತ ಭಾರೀ ಮಳೆ ಮುಂದು ವರೆದಿದ್ದು, ಅಲ್ಲಲ್ಲಿ ಭೂ ಕುಸಿತ, ಮರ ಮುರಿದು ಬಿದ್ದಿರುವ ಘಟನೆಗಳ ಸಹಿತ ಹಾನಿಗಳಾದ ಬಗ್ಗೆ ವರದಿಯಾಗಿದೆ. ಅಮ್ಮತ್ತಿ, ಮಾದಾಪುರ, ಗರಗಂದೂರು, ಕೂಡಿಗೆ ಮತ್ತಿತ್ತರ ಕಡೆಗಳಲ್ಲಿ ಮರಗಳು ಮುರಿದು ಬಿದ್ದಿದ್ದು, ವಿದ್ಯುತ್ ಕಂಬಗಳು ಮತ್ತು ತಂತಿಗಳು ತುಂಡರಿಸಲ್ಪಟ್ಟಿದೆ. ಇದರಿಂದ ಕೆಲವು ಭಾಗಗಳಲ್ಲಿ ಕಗ್ಗತ್ತಲು ಮನೆ ಮಾಡಿದೆ. ಸುರಿಯುತ್ತಿರುವ ಮಳೆಯ ನಡುವೆ ವಿದ್ಯುತ್ ಕಂಬಗಳ ಬದಲಿ ವ್ಯವಸ್ಥೆ ಹಾಗೂ ಲೈನ್‍ಗಳ ದುರಸ್ತಿ ಕಾರ್ಯ ಸಮಾರೋಪಾದಿಯಲ್ಲಿ ಸಾಗಿದೆಎಂದು ಚೆಸ್ಕಾಂ ಇಲಾಖೆ ಮಾಹಿತಿ ನೀಡಿದೆ. ರಸ್ತೆಗೆಅಡ್ಡಲಾಗಿ ಬಿದ್ದಿದ್ದ
ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದೆ.

ಭಾರೀ ಮಳೆಗೆ ಮಕ್ಕಂದೂರು ಸಮೀಪದಜಹಂಗೀರ್ ಪೈಸಾರಿ ಎಂಬಲ್ಲಿ ಸಣ್ಣ ಪ್ರಮಾಣದ ಭೂ ಕುಸಿತವಾಗಿದೆ. ಬರೆ ಕುಸಿದು ಚಂದ್ರಶೇಖರ್ ಎಂಬವರ ಮನೆ ಮೇಲೆ ಬಿದ್ದಿದ್ದು ಮನೆಯ ಹಿಂಭಾಗಕ್ಕೆ ಹಾನಿಯಾಗಿದೆ. ಶನಿವಾರರಾತ್ರಿ ಈ ಘಟನೆ ನಡೆದಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ಮೊಣ್ಣಂಗೇರಿ ಸಮೀಪದ ವಿವೇಕಗಿರಿಗೆ ಸಂಪರ್ಕಿಸುವರಸ್ತೆಗೆ ಬರೆ ಕುಸಿದು ಬಿದ್ದು, ಸಂಚಾರ ಬಂದ್‍ಆಗಿತ್ತು. ಮಾಹಿತಿಅರಿತ ಪಂಚಾಯಿತಿಟಾಸ್ಕ್ ಫೋರ್ಸ್ ಮಣ್ಣನ್ನು ತೆರವುಗೊಳಿಸಿದೆ.

ಮದೆನಾಡು ಸಮೀಪದ 2ನೇ ಮೊಣ್ಣಂಗೇರಿ ಎಂಬಲ್ಲಿ ಭೂಮಿ ಒಳಗಿನಿಂದ ಜಲ ಉಕ್ಕಿ ಹರಿಯುತ್ತಿರುವ ಪರಿಣಾಮ ಮಡಿಕೇರಿ-ಮಾಣಿ 275 ರಾಷ್ಟ್ರೀಯ ಹೆದ್ದಾರಿಗೆ ಹಾನಿಯಾಗಿದೆ. ಸ್ಥಳದಲ್ಲಿ ಸುರಕ್ಷತಾಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಹೆದ್ದಾರಿ ಸಂಚಾರಕ್ಕೆ ಸದ್ಯಕ್ಕೆತೊಡಕಾಗಿಲ್ಲ. ಮಳೆ ಮತ್ತಷ್ಟು ಬಿರುಸು ಪಡೆದಲ್ಲಿ ಈ ಸ್ಥಳದಲ್ಲಿ ಹೆದ್ದಾರಿಗೆ ಭಾರಿ ಹಾನಿ ಸಂಭವಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. 2018ರಲ್ಲಿ ಈ ಭಾಗದಲ್ಲಿ ಸಂಭವಿಸಿದ ಭೂ ಕುಸಿತದ ಬಳಿಕ ಈ ಸ್ಥಳದಲ್ಲಿ ಹೆದ್ದಾರಿಯಲ್ಲಿಉಬ್ಬುಕಂಡು ಬರುತ್ತಿದ್ದು, ಪ್ರತ್ರಿ ವರ್ಷ ದುರಸ್ತಿ ಕಾರ್ಯ ನಡೆಸಿದ್ದರೂ ಶಾಶ್ವತ ಪರಿಹಾರ ಸಾಧ್ಯವಾಗಿಲ್ಲ.

Translate »