ಮೈಸೂರು, ನ.19(ಎಸ್‍ಬಿಡಿ)-ನಿರಂತರ ಮಳೆಯಿಂದ ಮೈಸೂರು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
ನೂರಾರು ರೈತರು ಕಷ್ಟಪಟ್ಟು ಬೆಳೆದ ಬೆಳೆ ಮಳೆಯಿಂದ ನೀರು ಪಾಲಾಗಿದೆ. ಕಳೆದ 20 ದಿನಗಳಲ್ಲೇ ಸುಮಾರು 68 ಹೆಕ್ಟೇರ್‍ನಷ್ಟು ಬೆಳೆ ನಷ್ಟವಾಗಿದೆ. ಪ್ರಸಕ್ತ ಖಾರಿಫ್ ಅವಧಿಯಲ್ಲಿ 46.15 ಹೆಕ್ಟೇರ್ ಮಳೆ ಆಶ್ರಿತ ಹಾಗೂ 54.17 ಹೆಕ್ಟೇರ್ ನೀರಾವರಿ ಸೇರಿದಂತೆ ಒಟ್ಟು 100.32 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾಳಾಗಿದೆ.
ಹೆಚ್.ಡಿ.ಕೋಟೆ ತಾಲೂಕಿನಲ್ಲಿ 64 ರೈತರ 26.84 ಹೆಕ್ಟೇರ್, ಹುಣಸೂರು ತಾಲೂಕಿನಲ್ಲಿ 40 ರೈತರ 24.35 ಹೆಕ್ಟೇರ್, ಕೆ.ಆರ್.ನಗರದಲ್ಲಿ 38 ರೈತರ 30 ಹೆಕ್ಟೇರ್, ಮೈಸೂರು ತಾಲೂಕಿನಲ್ಲಿ 23 ರೈತರ 12.57 ಹೆಕ್ಟೇರ್ ಹಾಗೂ ನಂಜನಗೂಡಿನಲ್ಲಿ 14 ರೈತರ 6.56 ಹೆಕ್ಟೇರ್ ಬೆಳೆನಷ್ಟವಾಗಿದೆ. ಜಿಲ್ಲೆಯಲ್ಲಿ ಒಟ್ಟು 179 ರೈತರ 100.32 ಹೆಕ್ಟೇರ್‍ನಲ್ಲಿದ್ದ ಬೆಳೆ ಹಾನಿಯಾಗಿದೆ. ಪಿರಿಯಾಪಟ್ಟಣ ಹಾಗೂ ತಿ.ನರಸೀಪುರ ತಾಲೂಕಿನಲ್ಲಿ ಬೆಳೆ ಹಾನಿ ಬಗ್ಗೆ ಈವರೆಗೆ ವರದಿಯಾಗಿಲ್ಲ.
ಯಾವ ಬೆಳೆ-ಎಷ್ಟು ಹಾನಿ?: 2 ವಾರಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಭತ್ತ, ಹತ್ತಿ ಹಾಗೂ ರಾಗಿ ಬೆಳೆಗೆ ಹೆಚ್ಚು ಹಾನಿಯಾಗಿದೆ. 50.68 ಹೆಕ್ಟೇರ್ ಭತ್ತ, 6.08 ಹೆಕ್ಟೇರ್ ಹತ್ತಿ, 27.8 ಹೆಕ್ಟೇರ್ ರಾಗಿ, 9 ಹೆಕ್ಟೇರ್ ಮೆಕ್ಕೆಜೋಳ, 3.49 ಹೆಕ್ಟೇರ್ ಕಬ್ಬು, 1.60 ಹೆಕ್ಟೇರ್ ಚಿಯಾ, 1.11 ಹೆಕ್ಟೇರ್ ಹುರುಳಿ, 0.60 ಹೆಕ್ಟೇರ್ ಹೆಸರು ನಷ್ಟವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ.
ಪರಿಹಾರಕ್ಕೆ ಕ್ರಮ: ಎರಡು ಹೆಕ್ಟೇರ್‍ಗಿಂತ ಕಡಿಮೆ ಕೃಷಿಭೂಮಿ ಹೊಂದಿರುವ ರೈತರು ಪರಿಹಾರಕ್ಕೆ ಅರ್ಹರು. ಅದರಲ್ಲೂ ಶೇ.33ಕ್ಕಿಂತ ಹೆಚ್ಚು ಪ್ರಮಾಣದ ಬೆಳೆ ನಷ್ಟವಾಗಿರುವ ರೈತರನ್ನು ಮಾತ್ರ ನೆರವಿಗೆ ಪರಿಗಣಿಸಲಾಗುತ್ತದೆ. ಮಳೆ ಆಶ್ರಿತ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದರೆ 6,800 ರೂ. ಹಾಗೂ ನೀರಾವರಿ ಪ್ರದೇಶದ ಬೆಳೆ ನಷ್ಟಕ್ಕೆ 13,500 ರೂ. ಪರಿಹಾರ ನೀಡಲಾಗುತ್ತದೆ. ಇದರಂತೆ ಖಾರಿಫ್ ಅವಧಿಯಲ್ಲಿ ಗುರುತಿಸಲಾಗಿರುವ 179 ರೈತರಿಗೆ ಒಟ್ಟು 22.63 ಲಕ್ಷ ರೂ. ನೆರವು ಕಲ್ಪಿಸಲು ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಮಹಾ ಮಳೆ: 24 ಗಂಟೆಗಳಲ್ಲಿ ಹೆಚ್.ಡಿ.ಕೋಟೆ 5.7 ಮಿ.ಮೀ., ಹುಣಸೂರು 6, ಕೆ.ಆರ್.ನಗರ 7.3, ಮೈಸೂರು 8.5, ನಂಜನಗೂಡು 7.4, ಪಿರಿಯಾಪಟ್ಟಣ 6.3, ತಿ.ನರಸೀ ಪುರ 19.4 ಹಾಗೂ ಸರಗೂರು ತಾಲೂಕು ವ್ಯಾಪ್ತಿಯಲ್ಲಿ 11.3 ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ 8.4 ಮಿ.ಮೀ.ನಷ್ಟು ಮಳೆಯಾಗಿದೆ. ಕಳೆದ 7 ದಿನಗಳಲ್ಲಿ 70.7 ಮಿ.ಮೀ. ಸೇರಿದಂತೆ ಪ್ರಸಕ್ತ ತಿಂಗಳಲ್ಲಿ ಒಟ್ಟು 146.8 ಮಿ.ಮೀ. ಮಳೆ ಸುರಿದಿದೆ. ಅ.1ರಿಂದ ನ.19ರವರೆಗೆ ಬರೋಬ್ಬರಿ 430 ಮಿ.ಮೀ. ಮಳೆಯಾಗಿದೆ ಎಂದು ವರದಿ ಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕೇವಲ 187.9 ಮಿ.ಮೀ. ಮಳೆಯಾಗಿತ್ತು.