ಜಯಪುರ ಹೋಬಳಿಯಾದ್ಯಂತ ಬಿರುಗಾಳಿ ಸಹಿತ ಮಳೆ: ಅಪಾರ ನಷ್ಟ
ಮೈಸೂರು, ಮೈಸೂರು ಗ್ರಾಮಾಂತರ

ಜಯಪುರ ಹೋಬಳಿಯಾದ್ಯಂತ ಬಿರುಗಾಳಿ ಸಹಿತ ಮಳೆ: ಅಪಾರ ನಷ್ಟ

May 27, 2020

ಜಯಪುರ, ಮೇ 26(ಬಿಳಿಗಿರಿ)-ಮೈಸೂರು ತಾಲೂಕಿನ ಜಯಪುರ ಹೋಬಳಿಯಾದ್ಯಂತ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ರೈತರು ಬೆಳೆದಿರುವ ತೋಟಗಾರಿಕೆ ಬೆಳೆ ನಾಶವಾಗಿದ್ದು, ಅಪಾರ ಹಾನಿ ಸಂಭವಿಸಿದೆ.

ಹೋಬಳಿಯ ತಳೂರು ಕೆರೆಹುಂಡಿ, ಗೋಪಾಲಪುರ, ಬೀರಿಹುಂಡಿ, ದೂರ, ಹಾರೋಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 150 ಎಕರೆಯಷ್ಟು ಬಾಳೆ ತೋಟ ಬಿರುಗಾಳಿಗೆ ನೆಲಕಚ್ಚಿದೆ. ಕೆರೆಹುಂಡಿ, ಗೋಪಾಲಪುರ, ಡಿ.ಸಾಲುಂಡಿಯಲ್ಲಿ ಮನೆಗಳು ಕುಸಿದಿದ್ದು, ಬಿರುಗಾಳಿಗೆ ಮನೆಯ ಚಾವಣಿ ಹಾರಿಹೋಗಿವೆ. ದಡದಹಳ್ಳಿ ಮತ್ತು ಸಿಂಧು ಹಳ್ಳಿಯಲ್ಲಿ ರೈತರ ಟೊಮೊಟೊ, ಮಂಗಳೂರು ಸೌತೆಕಾಯಿ ಬೆಳೆ ಆಲಿಕಲ್ಲು ಬಿದ್ದು ನಾಶವಾಗಿವೆ.

ಹೋಬಳಿಯಾದ್ಯಂತ ದಾರಿಪುರ, ಬರಡನಪುರ ಹಾರೋಹಳ್ಳಿ, ಬೀರಿಹುಂಡಿ ಮುಂತಾದಕಡೆ ಹಾಗಲಕಾಯಿ, ಲಾಂಗ್ ಬೀನಿಸ್, ಸೌತೆಕಾಯಿ, ಹೀರೇಕಾಯಿ ಬೆಳೆ ನಾಶವಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಸರ್ಕಾರದಿಂದ ಪರಿಹಾರಕ್ಕಾಗಿ ರೈತರು ಎದುರು ನೋಡುತ್ತಿದ್ದಾರೆ.

ಬೆಳೆ ಹಾನಿ ಉಂಟಾಗಿದ್ದ ಜಮೀನುಗಳಿಗೆ ಗ್ರಾಮಲೆಕ್ಕಿಗರು ಭೇಟಿ ನೀಡಿ, ಪರಿಶೀಲಿಸಿರುವುದಾಗಿ ಜಯಪುರ ನಾಡಕಚೇರಿ ರಾಜಸ್ವನಿರೀಕ್ಷಕ ಪ್ರಭಾಕರ್ ಮಾಹಿತಿ ನೀಡಿದ್ದಾರೆ. ತೋಟಗಾರಿಕೆ ಬೆಳೆ ಹಾನಿ ವರದಿ ಸಿದ್ಧಪಡಿಸಿ, ಕಂದಾಯ ಇಲಾಖೆಗೆ ಸಲ್ಲಿಸಿ, ಪರಿಹಾರ ದೊರಕಿಸುವುದಾಗಿ ಜಿಲ್ಲಾ ತೋಟಗಾರಿಕೆ ಇಲಾಖಾ ಅಧಿಕಾರಿ ರುದ್ರೇಶ್ ಭರವಸೆ ನೀಡಿದ್ದಾರೆ.

ಮರ ಉರುಳಿ ಕೆಲಕಾಲ ಹೆದ್ದಾರಿ ಬಂದ್: ಮೈಸೂರು ಮಾನಂದವಾಡಿ ಹೆದ್ದಾರಿಯಲ್ಲಿ ಭಾರೀ ಗಾತ್ರದ ಮರಗಳು ರಸ್ತೆ ಮಧ್ಯಕ್ಕೆ ಉರುಳಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ತಕ್ಷಣ ಕಾರ್ಯ ಪ್ರವೃತರಾದ ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆ ಮಧ್ಯೆ ಬಿದ್ದಿದ್ದ ಮರ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Translate »