ಮೈಸೂರಲ್ಲಿ ಭಾರೀ ಮಳೆ ಗಾಳಿ
ಮೈಸೂರು

ಮೈಸೂರಲ್ಲಿ ಭಾರೀ ಮಳೆ ಗಾಳಿ

March 20, 2022

ಕೆಲವೆಡೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು

ಹಲವೆಡೆ ವಿದ್ಯುತ್ ವ್ಯತ್ಯಯ:ರಸ್ತೆಗಳಲ್ಲಿ ನೀರು

ಮರ ಬಿದ್ದು ಕಾರು ಜಖಂ: ಮೂವರು ಪಾರು, ವಾಹನ ಸಂಚಾರ ಅಸ್ತವ್ಯಸ್ತ

ಮೈಸೂರು, ಮಾ.೧೯ (ಎಂಕೆ)- ಸಾಂಸ್ಕೃತಿಕ ನಗರಿ ಮೈಸೂ ರಿನ ಕೆಲವೆಡೆ ಶನಿವಾರ ಸಂಜೆ ಧಾರಾಕಾರವಾಗಿ ಸುರಿದ ಅಕಾಲಿಕ ಮಳೆ-ಗಾಳಿಗೆ ೩ ಮರಗಳು ಹಾಗೂ ೧೦ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.

ಶನಿವಾರ ಸಂಜೆ ೫.೩೦ರ ವೇಳೆಗೆ ಆರಂಭಗೊAಡ ಭಾರೀ ಗಾಳಿ-ಮಳೆಯಿಂದ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಅಶೋಕಪುರಂ ಪೊಲೀಸ್ ಠಾಣೆ ಎದುರಿನ ಬೃಹತ್ ಮರ ಧರೆಗುರುಳಿದ್ದು, ಮರದ ಕೆಳಗೆ ನಿಲ್ಲಿಸಿದ್ದ ಮಾರುತಿ ಸ್ವಿಫ್ಟ್ ಡಿಸೈರ್ (ಕೆಎ೦೯ ಝಡ್೩೩೦೭) ಕಾರು ಜಖಂಗೊAಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎನ್.ಆರ್.ಮೊಹಲ್ಲಾ ವ್ಯಾಪ್ತಿಯ ಕೆಸರೆ ೩ನೇ ಹಂತ ಹಾಗೂ ಆಲನಹಳ್ಳಿಯಲ್ಲಿ ತೆಂಗಿನಮರಗಳು ಬುಡ ಸಮೇತ ವಿದ್ಯುತ್ ತಂತಿಯ ಮೇಲೆ ಉರುಳಿದ್ದು, ಪರಿಣಾಮ ವಿದ್ಯುತ್ ಕಂಬ ಗಳು ತುಂಡಾಗಿವೆ. ಹಾಗೆಯೇ ಎನ್.ಆರ್.ಮೊಹಲ್ಲಾ ವ್ಯಾಪ್ತಿಯ ವಿವಿಧೆಡೆ ೪ ಮತ್ತು ಆಲನಹಳ್ಳಿಯಲ್ಲಿ ಇನ್ನೆರಡು ಕಡೆ ಸೇರಿ ಒಟ್ಟು ೧೦ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ಬಿ.ಕೆ. ಯೋಗೇಶ್ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.
ಭಾರೀ ಗಾಳಿ-ಮಳೆಯಿಂದಾಗಿ ಮೈಸೂರಿನ ಬಹುತೇಕ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕಕಡಿತವಾಗಿತ್ತು. ಕುವೆಂಪುನಗರ, ಉದಯಗಿರಿ, ಆಲನಹಳ್ಳಿ, ಆಲನಹಳ್ಳಿ ಬಡಾವಣೆ, ಸಿದ್ದಾರ್ಥ ನಗರ, ಗಿರಿದರ್ಶಿನಿ ಬಡಾವಣೆ, ರಾಜೀವ್‌ನಗರ ಇನ್ನಿತರೆ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಅಶೋಕಪುರಂ ಪೊಲೀಸ್ ಠಾಣೆ ಎದುರಿನ ಬೃಹತ್ ಮರ ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪಾಲಿಕೆ ಹಾಗೂ ಚೆಸ್ಕಾಂ ಸಿಬ್ಬಂದಿ, ತೆರವು ಕಾರ್ಯಾಚರಣೆ ನಡೆಸಿದರು. ಪಾಲಿಕೆಯ ಅಭಯ-೩ರ ಸಿಬ್ಬಂದಿ ಅಶೋಕಪುರಂ ಪೊಲೀಸ್ ಠಾಣೆ ಎದುರು ಧರೆಗುರುಳಿದ್ದ ಬೃಹತ್ ಮರದ ರಂಬೆ-ಕೊAಬೆಗಳನ್ನು ಕತ್ತರಿಸಿ, ಜಖಂಗೊAಡಿದ್ದ ಕಾರನ್ನು ಹೊರತೆಗೆದರು. ತುಂಬಿ ಹರಿದ ರಸ್ತೆ-ಚರಂಡಿಗಳು: ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಕೆ.ಆರ್.ವೃತ್ತ, ಮೆಟ್ರೋಪೋಲ್ ವೃತ್ತ, ದಾಸಪ್ಪ ಸರ್ಕಲ್ ಸೇರಿದಂತೆ ಪ್ರಮುಖ ವೃತ್ತಗಳು ಹಾಗೂ ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಹುಣಸೂರು ಮುಖ್ಯರಸ್ತೆ, ಬನ್ನೂರು ಮುಖ್ಯರಸ್ತೆ, ಸೇರಿದಂತೆ ಇನ್ನಿತರೆಡೆ ಹಲವು ಅಡಿಗಳಷ್ಟು ನೀರು ಹರಿಯುತ್ತಿತ್ತು. ಪರಿಣಾಮ ವಾಹನ ಸವಾರರು, ಪಾದಚಾರಿಗಳು ಪರದಾಡು ವಂತಾಯಿತು. ದಿಢೀರ್ ಮಳೆಯಿಂದಾಗಿ ರಸ್ತೆ ಬದಿ ವ್ಯಾಪಾರಿಗಳು ತಮ್ಮ ಪದಾರ್ಥ ಗಳನ್ನು ಬೇರೆ ಸ್ಥಳಗಳಿಗೆ ಸಾಗಿಸಲು ಹಾಗೂ ಅವುಗಳನ್ನು ಮಳೆಯಿಂದ ರಕ್ಷಿಸಲು ಪರದಾಡಿದರು. ರಸ್ತೆ ಮತ್ತು ಚರಂಡಿಗಳು ತುಂಬಿ ಹರಿದು, ಮಳೆ ನೀರು ಮೈಸೂರಿನ ಕನಕಗಿರಿ, ಗುಂಡೂರಾವ್‌ನಗರ ಸೇರಿದಂತೆ ಕೆಲ ಬಡಾವಣೆಗಳ ಮನೆಗಳಿಗೂ ನುಗ್ಗಿದೆ ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದ್ದಾರೆ. ಹಳೇ ಮೈಸೂರು ಭಾಗದ ಕೊಡಗು, ಚಾ.ನಗರ, ಹಾಸನ, ಮಂಡ್ಯದಲ್ಲೂ ಮಳೆಯಾಗಿದೆ. ಚಾ.ನಗರ ಜಿಲ್ಲೆಯಲ್ಲಿ ಬಾರೀ ಮಳೆ-ಗಾಳಿಯಿಂದಾಗಿ ಅಪಾರ ಹಾನಿಯುಂಟಾದ ಬಗ್ಗೆ ವರದಿಯಾಗಿದೆ.

Translate »