ಶ್ರೀರಂಗಪಟ್ಟಣ ಬಳಿ ಭಾರೀ ಬಿರುಗಾಳಿ ಬೈಕ್, ಕಾರಿನ ಮೇಲೆ ತೆಂಗಿನಮರ ಉರುಳಿ ಬಾಲಕಿ ಸಾವು
ಮೈಸೂರು

ಶ್ರೀರಂಗಪಟ್ಟಣ ಬಳಿ ಭಾರೀ ಬಿರುಗಾಳಿ ಬೈಕ್, ಕಾರಿನ ಮೇಲೆ ತೆಂಗಿನಮರ ಉರುಳಿ ಬಾಲಕಿ ಸಾವು

March 20, 2022

ಮೂವರಿಗೆ ಗಾಯ, ಬಾಲಕಿ ತಂದೆ ಗಂಭೀರ

ಬೈಕ್, ಕಾರು ಜಖಂ; ಕಾರಿನಲ್ಲಿದ್ದವರೆಲ್ಲ ಪಾರು

ಶ್ರೀರಂಗಪಟ್ಟಣ,ಮಾ.೧೯-ಶನಿವಾರ ಸಂಜೆ ಭಾರೀ ಗಾಳಿಯಿಂದ ಬೈಕ್ ಹಾಗೂ ಕಾರಿನ ಮೇಲೆ ತೆಂಗಿನಮರ ಉರುಳಿ ಬಿದ್ದು, ಬೈಕ್ ನಲ್ಲಿದ್ದ ಬಾಲಕಿ ಸಾವನ್ನಪ್ಪಿ, ದಂಪತಿ, ಗಾಯ ಗೊಂಡಿದ್ದು, ಘಟನೆಯಲ್ಲಿ ಬೈಕು ಮತ್ತು ಕಾರು ಜಖಂಗೊAಡಿವೆ. ಈ ಘಟನೆ ಬನ್ನೂರು-ಶ್ರೀರಂಗಪಟ್ಟಣ ರಸ್ತೆಯ ಮರಳಗಾಲ-ದೊಡ್ಡ ಪಾಳ್ಯ ಮಧ್ಯೆ ಸಂಭವಿಸಿದೆ. ಕೆಆರ್‌ಎಸ್ ನಿವಾಸಿ ನಾಗರಾಜು ಪುತ್ರಿ ಪ್ರಿಯಾಂಕ (೧೨) ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿರುವ ನಾಗರಾಜು ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ನಾಗರಾಜು ಅವರ ಪತ್ನಿ ಮತ್ತು ಪುತ್ರ ಸಣ್ಣ-ಪುಟ್ಟ ಗಾಯಗಳಿಂದ ಪಾರಾದರೆ, ಕಾರಿನಲ್ಲಿದ್ದವರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನಾಗರಾಜು ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಭಾರೀ ಗಾಳಿಯಿಂದ ರಸ್ತೆ ಬದಿಯ ತೆಂಗಿನ ಮರ ಬೈಕ್ ಮತ್ತು ಪಕ್ಕದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಇದರಿಂದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿ, ಅವರ ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮರ ಉರುಳಿದ್ದರಿಂದ ಬೈಕು ಮತ್ತು ಕಾರು ಜಖಂಗೊAಡಿವೆ. ಪಟ್ಟಣದಲ್ಲಿ ಭಾರೀ ಗಾಳಿಗೆ ಮರಗಳು ಉರುಳಿ ಬಿದ್ದಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿ ಪಟ್ಟಣ ಕಗ್ಗತ್ತಲಲ್ಲಿ ಮುಳುಗಿದೆ. ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »