ಮೈಸೂರಲ್ಲಿ ಭಾರೀ ಮಳೆ: ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ
ಮೈಸೂರು

ಮೈಸೂರಲ್ಲಿ ಭಾರೀ ಮಳೆ: ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ

August 2, 2022

ಮೈಸೂರು, ಆ.1(ಎಂಕೆ, ಎಸ್‍ಪಿಎನ್)- ಸೋಮವಾರ ರಾತ್ರಿ ಗುಡುಗು-ಮಿಂಚು ಸಹಿತ ಸುರಿದ ಭಾರೀ ಮಳೆ ಯಿಂದಾಗಿ ಮೈಸೂರಿನಲ್ಲಿ ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಬೆಳಗ್ಗೆಯಿಂದ ಬಿಡುವು ನೀಡಿದ್ದ ಮಳೆ ಸಂಜೆ 6.30ರ ಸುಮಾರಿಗೆ ಶುರುವಾಗಿ ತಡರಾತ್ರಿಯವರೆಗೂ ಧಾರಾಕಾರವಾಗಿ ಸುರಿಯಿತು. ಬೆಳಗ್ಗೆಯಿಂದ ಬಿಡುವು ನೀಡಿದ್ದ ಮಳೆ ಸಂಜೆ 6.30ರ ಸುಮಾರಿಗೆ ಶುರುವಾಗಿ ತಡರಾತ್ರಿಯವರೆಗೂ ಧಾರಾಕಾರವಾಗಿ ಸುರಿಯಿತು. ಪರಿಣಾಮ ಜನತಾನಗರ ಸಾಹುಕಾರ್ ಚೆನ್ನಯ್ಯ ಮುಖ್ಯ ರಸ್ತೆಯ 7ನೇ ಅಡ್ಡರಸ್ತೆಯ 5 ರಿಂದ 10 ಮನೆಗಳು ಹಾಗೂ ರಾಜರಾಜೇಶ್ವರಿ ನಗರದ ಎರಡ್ಮೂರು ಆಶ್ರಯ ಮನೆಗಳಿಗೆ, ಮಹದೇಶ್ವರ ಬಡಾವಣೆ ಹಾಗೂ ಬೆಲವತ್ತ ಗ್ರಾಮದ ಕೆಲವು ಮನೆಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡು ವಂತಾಯಿತು. ಮನೆಯೊಳಗೆ ಮಂಡಿಯುದ್ದಕ್ಕೆ ನಿಂತಿದ್ದ ನೀರನ್ನು ಹೊರಹಾಕಲು ಹರಸಾಹಸ ಪಡುವಂತಾಯಿತು.

ಹಾಗೆಯೇ ಹೆಬ್ಬಾಳಿನ ಲಕ್ಷ್ಮೀಕಾಂತ ನಗರ, ವಿಜಯನಗರ 3ನೇ ಹಂತ, ಎನ್.ಆರ್.ಮೊಹಲ್ಲಾ ಹಾಗೂ ಬನ್ನಿಮಂಟಪ 2ನೇ ಹಂತದಲ್ಲಿ ಯುಜಿಡಿ ಮ್ಯಾನ್‍ಹೋಲ್‍ಗಳು ತುಂಬಿ ಹರಿದಿದ್ದು, ಪಾದಚಾರಿಗಳು ತಿರುಗಾಡುವುದಕ್ಕೂ ಕಷ್ಟವಾಗಿದೆ. ನಗರದ ಮಧುವನ, ಗುಂಡೂರಾವ್‍ನಗರ, ಚಾಮುಂಡಿಪುರಂ, ಕನಕಗಿರಿ, ಉದಯಗಿರಿ ಸೇರಿದಂತೆ ತಗ್ಗು ಪ್ರದೇಶದ ಬಡಾವಣೆಗಳ ಹಲವಾರು ಮನೆಗಳಿಗೆ ನೀರು ನುಗ್ಗಿದೆ.

ವಿದ್ಯುತ್ ವ್ಯತ್ಯಯ:ಮಳೆ ರಭಸಕ್ಕೆ ವಿವಿ ಮೊಹಲ್ಲಾ ವ್ಯಾಪ್ತಿಯ ಬಡಾವಣೆಗಳು ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾ ಗಿದೆ. ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಚಾಮುಂಡಿ ಬೆಟ್ಟದ ತಪ್ಪಲಿನ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಸೋಮವಾರ ರಾತ್ರಿ ಸುರಿದ ಮಳೆಗೂ ಕೆಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿರುವ ಸಾಧ್ಯತೆ ಇದೆ ಎಂದು ಚೆಸ್ಕಾಂನ ಕಾರ್ಯಪಾಲಕ ಅಭಿಯಂತರ ಪೂರ್ಣಚಂದ್ರ ತೇಜಸ್ವಿ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.ಕಾಮಗಾರಿಗಳಿಗೆ ತೊಡಕು:ಮೈಸೂರಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಯುಜಿಡಿ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿದೆ. ಡಿ.ದೇವರಾಜ ಅರಸು ರಸ್ತೆ (ಕೆ.ಆರ್.ವೃತ್ತ ಬಳಿ)ಯಲ್ಲಿ, ಆದಿಚುಂಚನಗಿರಿ ರಸ್ತೆ, ಶಿವರಾಂ ಪೇಟೆ ರಸ್ತೆ ಬದಿ (ಸಂಚಾರ ಪೊಲೀಸ್ ಉಪ ಆಯುಕ್ತರ ಕಚೇರಿ ಬಳಿ) ಹಾಗೂ ಹಲವೆಡೆ ಕಾಮಗಾರಿ ಹಿನ್ನೆಲೆಯಲ್ಲಿ ತೆಗೆದಿರುವ ಗುಂಡಿಗಳಿಗೆ ಮಳೆ ನೀರು ತುಂಬಿಕೊಂಡಿದ್ದು, ಮಳೆ ಬಿಡುವು ನೀಡಿದಾಗ ನೀರನ್ನು ಹೊರತೆಗೆಯುವುದೇ ಅರ್ಧ ದಿನದ ಕೆಲಸವಾಗುತ್ತಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Translate »