ಪಾರಂಪರಿಕ ಕಟ್ಟಡಗಳ ದತ್ತು ಯೋಜನೆ: ಜಿಲ್ಲಾಧಿಕಾರಿಗಳಿಗೆ ಪಾರಂಪರಿಕ ತಜ್ಞರ ಸಲಹೆ
ಮೈಸೂರು

ಪಾರಂಪರಿಕ ಕಟ್ಟಡಗಳ ದತ್ತು ಯೋಜನೆ: ಜಿಲ್ಲಾಧಿಕಾರಿಗಳಿಗೆ ಪಾರಂಪರಿಕ ತಜ್ಞರ ಸಲಹೆ

November 5, 2022

ಮೈಸೂರು, ನ. 4 (ಆರ್‍ಕೆ)- ಮೈಸೂರಿನ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಲು ದತ್ತು ಯೋಜನೆ ಯನ್ನು ಅನುಷ್ಠಾನಗೊಳಿಸಿ ಎಂದು ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರಿಗೆ ಸಲಹೆ ನೀಡಿದ್ದಾರೆ.

ಮೈಸೂರಿನ ಹುಣಸೂರು ರಸ್ತೆಯಲ್ಲಿ ರುವ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ ದಲ್ಲಿ ಪ್ರೊ. ರಂಗರಾಜು ನೇತೃತ್ವದ ತಜ್ಞರ ಸಮಿತಿ ಸದಸ್ಯರೊಂದಿಗೆ ಗುರುವಾರ ಸಭೆ ನಡೆಸಿದ ಡಾ. ಕೆ.ವಿ. ರಾಜೇಂದ್ರ ಅವರಿಗೆ ಪಾರಂಪರಿಕ ನಗರಿ ಮೈಸೂರಿನಲ್ಲಿರುವ ಬಹುತೇಕ ಪಾರಂಪರಿಕ ಕಟ್ಟಡಗಳು ಸರಿಯಾಗಿ ನಿರ್ವಹಣೆಯಾಗದ ಕಾರಣ ಶಿಥಿಲಗೊಂಡು ಒಂದೊಂದಾಗಿ ಕುಸಿಯ ಲಾರಂಭಿಸಿವೆ ಎಂದು ತಿಳಿಸಿದರು.

ಈ ಕಟ್ಟಡಗಳನ್ನು ಪುನರುಜ್ಜೀವನ ಗೊಳಿಸಿ ಸಂರಕ್ಷಿಸಲು ದತ್ತು ನೀಡುವ ಯೋಜನೆ ಜಾರಿಗೊಳಿಸಿದರೆ ಇನ್ಫೋಸಿಸ್, ವಿಪ್ರೋ, ಟಿವಿಎಸ್, ಜೆಕೆ ಟೈರ್ಸ್‍ನಂತಹ ಬೃಹತ್ ಕಂಪನಿಗಳ ಉದ್ಯಮಿಗಳು ಸಿಎಸ್‍ಆರ್ ಅಡಿ ಹಣ ಖರ್ಚು ಮಾಡಿ ಪಾರಂಪರಿಕ ಕಟ್ಟಡಗಳನ್ನು ನಿರ್ವಹಿಸುವರು ಎಂದು ಪ್ರೊ. ರಂಗಸ್ವಾಮಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಪಾರಂಪರಿಕ ಕಟ್ಟಡಗಳ ನಿಯಮ 2020ರ ಪ್ರಕಾರ ಹೊರಗಿನ ಸ್ಟೇಕ್ ಹೋಲ್ಡರ್‍ಗಳು, ಎನ್‍ಆರ್‍ಐಗಳು, ಎನ್‍ಜಿಓಗಳಿಂದ ಹಣ ಕ್ರೂಢೀಕರಿಸಿ ಕಾರ್ಪಸ್ ಫಂಡ್ ಸೃಷ್ಟಿಸಿಕೊಂಡು ಪಾರಂಪರಿಕ ಕಟ್ಟಡಗಳ ದುರಸ್ತಿ, ಪುನರುಜ್ಜೀವನ ಮಾಡಿ ಸಂರಕ್ಷಿಸಲು ಅವಕಾಶವಿದೆ. ಹಾಗೆಯೇ ಅವುಗಳನ್ನು ದತ್ತು ನೀಡ ಬಹುದಾಗಿದೆ ಎಂಬುದನ್ನು ತಜ್ಞರು ಇದೇ ಸಂದರ್ಭ ನುಡಿದರು.

ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ಕಾಯ್ದೆ 1961 ಮತ್ತು ವಲಯ ನಿಯಮ ಗಳು (ತಿದ್ದುಪಡಿ) 2020ರನ್ವಯ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹೊರಗಿನವರಿಂದ ಪ್ರಾಯೋಜಕತ್ವ ಪಡೆಯಲು ಅವಕಾಶ ವಿದೆ. ನಮ್ಮ ಮೈಸೂರು ಫೌಂಡೇಷನ್ ಸಂಸ್ಥೆಯವರು ಕೆ.ಆರ್., ಚಾಮರಾಜೇಂದ್ರ, ಸರ್ಕಾರಿ ಆಯು ರ್ವೇದ ಕಾಲೇಜು ಸರ್ಕಲ್‍ಗಳನ್ನು ನಿರ್ವಹಣೆ ಮಾಡಲು ಬಯಸಿ ಕಳೆದ ಹಲವು ವರ್ಷಗಳಿಂದ ನಗರ ಪಾಲಿಕೆಗೆ ಮನವಿ ಮಾಡುತ್ತಿದ್ದರೂ ನೀಡಿಲ್ಲ ಎಂಬು ದನ್ನೂ ಪ್ರೊ.ರಂಗರಾಜು ಜಿಲ್ಲಾಧಿಕಾರಿ ಗಳ ಗಮನಕ್ಕೆ ತಂದರು.

ಹುಣಸೂರು ರಸ್ತೆಯಲ್ಲಿರುವ ಜಿಲ್ಲಾಧಿ ಕಾರಿಗಳ ಅಧಿಕೃತ ನಿವಾಸದ ಕಾಂಪೌಂಡ್ ಗೋಡೆ ಶಿಥಿಲಗೊಂಡಿದ್ದು, ಬೀಳುವ ಹಂತದಲ್ಲಿರುವುದರಿಂದ ಅದನ್ನು ತಳ ಮಟ್ಟದಿಂದ ತೆಗೆದು ಹಾಕಿ ಅದೇ ಪಾರಂಪ ರಿಕ ವಿನ್ಯಾಸದಲ್ಲಿ 3 ಅಡಿ ಎತ್ತರಕ್ಕೆ ಪುನರ್ ನಿರ್ಮಿಸಬೇಕೆಂದು ಸಲಹೆ ನೀಡಿದ ತಜ್ಞರ ಸಮಿತಿ ಸದಸ್ಯರು, ನಿವಾಸದ ಪಾರಂಪರಿಕ ಕಟ್ಟಡಕ್ಕೆ ಗೋಪಿ ಮತ್ತು ಬಿಳಿ ಬಣ್ಣ ಬಳಿಯ ಬೇಕೆಂದು ತಿಳಿಸಿದರು. ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ನಗರ ಯೋಜನಾ ಸಹಾಯಕ ನಿರ್ದೇಶಕ ಯಜ್ಞೇಂದ್ರ, ಪುರಾತತ್ವ, ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ಉಪನಿರ್ದೇಶಕಿ ಮಂಜುಳಾ, ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿ ಸದಸ್ಯರಾದ ರವಿ, ಗುಂಡೂರಾವ್, ಪ್ರೊ. ಶಕೀಬ್ ಉರ್ ರೆಹಮಾನ್, ಪ್ರೊ.ಲೋಕೇಶ್, ನರೇಂದ್ರ ಕುಮಾರ್, ಶರತ್ ಚಂದ್ರ, ನಮ್ಮ ಮೈಸೂರು ಫೌಂಡೇಷನ್ ಸಂಚಾಲಕ ದಶರಥ ಈ ಸಂದರ್ಭ ಉಪಸ್ಥಿತರಿದ್ದರು.

Translate »