ಸಾಲಕ್ಕೆ ಅಧಿಕ ಬಡ್ಡಿ ವಸೂಲಿ; ಇನ್ಫೋಸಿಸ್ ಉದ್ಯೋಗಿ ಆತ್ಮಹತ್ಯೆ
ಮೈಸೂರು

ಸಾಲಕ್ಕೆ ಅಧಿಕ ಬಡ್ಡಿ ವಸೂಲಿ; ಇನ್ಫೋಸಿಸ್ ಉದ್ಯೋಗಿ ಆತ್ಮಹತ್ಯೆ

January 7, 2021

ಮೈಸೂರು, ಜ.6(ವೈಡಿಎಸ್)- ಪಡೆದ ಸಾಲಕ್ಕೆ ಅಧಿಕ ಬಡ್ಡಿ ವಸೂಲಿ ಮಾಡಿದರೆಂದು ಮನನೊಂದ ಯುವಕನೊಬ್ಬ ಡೆತ್‍ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ನಂಜುಮಳಿಗೆಯಲ್ಲಿ ಬುಧವಾರ ನಡೆದಿದೆ.
ಇಲ್ಲಿನ ನಿವಾಸಿ ಸತೀಶ್‍ಕುಮಾರ್ ಎಂಬವರ ಪುತ್ರ ಗಗನ್(23) ಆತ್ಮಹತ್ಯೆ ಮಾಡಿ ಕೊಂಡ ಯುವಕ. ಈತ ಇನ್ಫೋಸಿಸ್ ಉದ್ಯೋಗಿಯಾಗಿದ್ದು, ಬುಧವಾರ ಮಧ್ಯಾಹ್ನ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಇದನ್ನು ಕಂಡ ತಂದೆ ಸತೀಶ್ ಕೂಡಲೇ ಮಗನನ್ನು ಹಗ್ಗದ ಕುಣಿಕೆಯಿಂದ ಕೆಳಕ್ಕಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಗಗನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಡೆತ್‍ನೋಟ್: ಜಯಂತ್, ಪ್ರಕಾಶ, ಹರ್ಷ ಮತ್ತು ಸಂಗಂ ಎಂಬವರು ನನಗೆ ಕೊಟ್ಟಿರುವ ಸಾಲದ ಮೊತ್ತಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ. ನನ್ನ ಸಾವಿಗೆ ಇವರೇ ಕಾರಣ ಎಂದು ಗಗನ್ ಡೆತ್‍ನೋಟ್ ಬರೆದಿರುವುದಾಗಿ ತಿಳಿದುಬಂದಿದೆ. ಇತ್ತೀಚೆಗೆ ಸಂಗಂ ಮನೆಯವರು ನಮ್ಮ ಮನೆಗೆ ಬಂದು ಗಲಾಟೆ ಮಾಡಿದ್ದರು. ಹಾಗಾಗಿ ಮನನೊಂದು ಪುತ್ರ ಗಗನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಗಂ ಮನೆಯವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಗಗನ್ ತಂದೆ ಸತೀಶ್ ದೂರು ನೀಡಿದ್ದಾರೆ. ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Translate »