ಚಾಮುಂಡಿಬೆಟ್ಟದಲ್ಲಿ ಗಾಯಗೊಂಡಿದ್ದ ಚಿರತೆ ಬನ್ನೇರುಘಟ್ಟದಲ್ಲಿ ಸಾವು
ಮೈಸೂರು

ಚಾಮುಂಡಿಬೆಟ್ಟದಲ್ಲಿ ಗಾಯಗೊಂಡಿದ್ದ ಚಿರತೆ ಬನ್ನೇರುಘಟ್ಟದಲ್ಲಿ ಸಾವು

January 7, 2021

ಮೈಸೂರು, ಜ.6(ಎಂಟಿವೈ)- ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 11 ವರ್ಷದ ಹೆಣ್ಣು ಚಿರತೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದೆ. ಚಾಮುಂಡಿಬೆಟ್ಟದಲ್ಲಿ ವಾಹನವೊಂದು ಚಿರತೆಯ ದೇಹದ ಮೇಲೆ ಹರಿದ ಪರಿಣಾಮ ಅದರ ಸೊಂಟದ ಮೂಳೆ ಮುರಿದಿತ್ತು.

ನಡೆದಿದ್ದೇನು: ಡಿ.28ರ ಬೆಳಿಗ್ಗೆ 7.45ರಲ್ಲಿ ದೇವಿಕೆರೆ ಸಮೀಪ ರಸ್ತೆ ಬದಿಯಲ್ಲೇ ಹಿಂಗಾಲುಗಳ ಸ್ವಾದೀನ ಕಳೆದುಕೊಂಡು ನರಳಾಡುತ್ತಿದ್ದ ಚಿರತೆ ವಾಯುವಿಹಾರಿಗಳ ಕಣ್ಣಿಗೆ ಬಿದ್ದಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದ ಅರಣ್ಯ ಸಿಬ್ಬಂದಿ ಹಾಗೂ ಪಶುವೈದ್ಯ ಡಾ.ಡಿ.ಎನ್.ನಾಗರಾಜು ರಸ್ತೆ ಪಕ್ಕದ ಪೊದೆ ಯಲ್ಲಿದ್ದ ಚಿರತೆಯನ್ನು ಪರಿಶೀಲಿಸಿದಾಗ ಸೊಂಟದಲ್ಲಿ ಸ್ವಾಧೀನ ಇಲ್ಲದಿರುವುದು ತಿಳಿದುಬಂದಿತ್ತು. ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬನ್ನೇರುಘಟ್ಟದ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿತ್ತು. ಡಿ.28ರ ಮಧ್ಯಾಹ್ನದಿಂದ ಬನ್ನೇರುಘಟ್ಟದ ಪುನರ್ವಸತಿ ಕೇಂದ್ರದ ಪಶುವೈದÀ್ಯ ಡಾ.ವಿ.ಉಮಾಶಂಕರ್ ಚಿಕಿತ್ಸೆ ಕೊಡುತ್ತಾ ಬಂದಿದ್ದರು. ತೀವ್ರ ನೋವಿನಿಂದಾಗಿ ಚಿರತೆ ಆಹಾರ ತ್ಯಜಿಸಿದ್ದರಿಂದ ಗ್ಲೂಕೋಸ್ ನೀಡಲಾಗಿತ್ತು. ಚಿರತೆಯ ಸೊಂಟದ ಭಾಗದ ಸ್ಕ್ಯಾನಿಂಗ್, ಎಕ್ಸ್‍ರೇ ಮಾಡಿಸಿದಾಗ ಮೂಳೆ ಛಿದ್ರಗೊಂಡಿರುವುದು ಗೋಚರಿಸಿತ್ತು. ಚಿಕಿತ್ಸೆ ಮುಂದುವರೆಸಿದರೂ ಫಲ ನೀಡಲಿಲ್ಲ. ಚಿರತೆ ಮಂಗಳವಾರ ರಾತ್ರಿ ಕೊನೆಯುಸಿರೆಳೆಯಿತು ಎಂದು ಡಾ.ವಿ.ಉಮಾಶಂಕರ್ ತಿಳಿಸಿದ್ದಾರೆ.

ದಟ್ಟ ಮಂಜು: ಡಿ.28ರಂದು ಮೈಸೂರಲ್ಲಿ ದಟ್ಟ ಮಂಜು ಕವಿದು ಅಪರಾಹ್ನ 11.15 ಗಂಟೆಯಾದರೂ ಸೂರ್ಯನ ಕಿರಣಗಳೇ ಗೋಚರಿಸಿರಲಿಲ್ಲ. ಚಾಮುಂಡಿಬೆಟ್ಟ ದಲ್ಲಿಯೂ ಮಂಜು ಮುಸುಕಿತ್ತು. ಬೆಟ್ಟದ ಮುಖ್ಯ ರಸ್ತೆಯಲ್ಲಿರುವ ಚಿದಂಬರೇಶ್ವರ ದೇವಾಲಯದ ಬಳಿ ರಸ್ತೆ ದಾಡುತ್ತಿದ್ದಾಗ ಚಿರತೆಗೆ ಲಘು ವಾಹನ ಡಿಕ್ಕಿ ಹೊಡೆದಿದೆ. ರಸ್ತೆಗುರುಳಿದ ಚಿರತೆ ಮೇಲೆ ವಾಹನದ ಚಕ್ರ ಹರಿದಿದೆ. ಪರಿಣಾಮ ಸೊಂಟದ ಮೂಳೆ ಛಿದ್ರಗೊಂಡಿವೆ. ದೇವಿಕೆರೆ ರಸ್ತೆವರೆಗೂ ತೆವಳಿದ ಚಿರತೆ, ನೋವು ತಾಳಲಾರದೆ ನರಳುತ್ತಿದ್ದಾಗ ವಾಯುವಿಹಾರಿಗಳ ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಬನ್ನೇರುಘಟ್ಟದ ನಿರ್ದೇಶಕಿ ವನಶ್ರೀ ಮತ್ತಿತರ ಅಧಿಕಾರಿ ಗಳ ಉಪಸ್ಥಿತಿಯಲ್ಲಿ ಚಿರತೆ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಹೇಳಲಾಗಿದೆ.

Translate »