ದಿನದ 24 ಗಂಟೆಯೂ ವಾಣಿಜ್ಯ ವಹಿವಾಟು ನಡೆಸುವ ಸರ್ಕಾರಿ ಆದೇಶ ಹೋಟೆಲ್‍ಗಳಿಗೂ ಅನ್ವಯವಾಗುವುದೇ?
ಮೈಸೂರು

ದಿನದ 24 ಗಂಟೆಯೂ ವಾಣಿಜ್ಯ ವಹಿವಾಟು ನಡೆಸುವ ಸರ್ಕಾರಿ ಆದೇಶ ಹೋಟೆಲ್‍ಗಳಿಗೂ ಅನ್ವಯವಾಗುವುದೇ?

January 7, 2021

ಮೈಸೂರು, ಜ.6(ಆರ್‍ಕೆ)-10ಕ್ಕಿಂತ ಹೆಚ್ಚು ಮಂದಿ ಸಿಬ್ಬಂದಿ ಗಳೊಂದಿಗೆ ದಿನದ 24 ಗಂಟೆಯೂ ವಾಣಿಜ್ಯ ವಹಿವಾಟುಗಳನ್ನು ನಡೆಸಬಹುದೆಂಬ ಸರ್ಕಾರಿ ಅಧಿಸೂಚನೆ ಹೋಟೆಲು ಗಳಿಗೂ ಅನ್ವಯಿಸುತ್ತದೆಯೇ? ಎಂಬ ಗೊಂದಲ ಹೋಟೆಲ್ ಮಾಲೀಕರಲ್ಲಿ ಉಂಟಾಗಿದೆ.

ಸರ್ಕಾರದ ಈ ಆದೇಶವನ್ನು ಸ್ವಾಗತಿಸಿರುವ ಮೈಸೂರು ಹೋಟೆಲು ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ರಾತ್ರಿ 12 ಗಂಟೆವರೆಗೆ ಹೋಟೆಲುಗಳನ್ನು ತೆರೆ ಯಲು ಅವಕಾಶ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಾತ್ರಿ 11.30 ಗಂಟೆಗೆ ಬಂದ್ ಮಾಡಬೇಕಾದ ಬಾರ್ ಅಂಡ್ ರೆಸ್ಟೋರೆಂಟ್‍ಗಳನ್ನು ಮಧ್ಯರಾತ್ರಿ 12.20 ಗಂಟೆವರೆಗೂ ತೆರೆಯಲು ಅವಕಾಶ ನೀಡಲಾಗುತ್ತಿದೆ. ಆದರೆ ಸಸ್ಯಾಹಾರ ಮತ್ತು ಮಾಂಸಾ ಹಾರ ಹೋಟೆಲುಗಳನ್ನು ಮಾತ್ರ ರಾತ್ರಿ 10 ಗಂಟೆಗೇ ಬಂದ್ ಮಾಡಿಸಲಾಗುತ್ತಿದೆ. ಮೈಸೂರು, ದೇಶದಲ್ಲೇ ಅತೀ ಪ್ರಮುಖ ಪ್ರವಾಸಿ ಕೇಂದ್ರವಾಗಿದ್ದು, ಪ್ರತೀ ವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ರಾತ್ರಿ 10 ಗಂಟೆ ನಂತರ ಬರುವವರು ಒಳ್ಳೆಯ ಹೋಟೆಲ್ ಸಿಗದ ಕಾರಣ ಖಾಲಿ ಹೊಟ್ಟೆಯಲ್ಲೇ ಮಲಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಸುನಿಲ್ ಅಗರ್‍ವಾಲ್ ಅವರು ಪೊಲೀಸ್ ಆಯುಕ್ತರಾಗಿ ದ್ದಾಗ ರಾತ್ರಿ 12ರವರೆಗೆ ಹೋಟೆಲ್ ತೆರೆಯಲು ಅವಕಾಶ ನೀಡಲಾಗುತ್ತಿತ್ತು. ನಂತರ ಬಂದ ವರು ಬೇರೆ ಬೇರೆ ಕಾರಣ ನೀಡಿ ಅವಕಾಶ ನೀಡಲಿಲ್ಲ. ಆದರೆ ಈಗ ರಾತ್ರಿ 9.30 ಗಂಟೆ ಯಾಗುತ್ತಿದ್ದಂತೆಯೇ ಹೋಟೆಲುಗಳನ್ನು ಬಲವಂತವಾಗಿ ಮುಚ್ಚಿಸ ಲಾಗುತ್ತಿದೆ. ದಿನದ 24×7 ಅಂಗಡಿ ಮುಂಗಟ್ಟು, ವಾಣಿಜ್ಯ ವಹಿ ವಾಟುಗಳು ನಡೆಯಬಹುದೆಂಬ ಸರ್ಕಾರಿ ಆದೇಶ ಹೋಟೆಲ್‍ಗಳಿಗೂ ಅನ್ವಯಿಸುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ನಾರಾಯಣಗೌಡರು ಒತ್ತಾಯಿಸಿದ್ದಾರೆ.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ದಿನದ 24 ಗಂಟೆಯೂ ವಾಣಿಜ್ಯ ವಹಿವಾಟು, 10ಕ್ಕಿಂತ ಹೆಚ್ಚು ಸಿಬ್ಬಂದಿಗಳೊಂದಿಗೆ ನಡೆಸಬಹುದೆಂಬ ಸರ್ಕಾರಿ ಆದೇಶ ಪತ್ರ ತಮಗೆ ಅಧಿಕೃತವಾಗಿ ತಲುಪಿಲ್ಲ. ಆದೇಶದ ಪ್ರತಿ ಬಂದ ಮೇಲೆ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದರು. ರಾತ್ರಿ 12 ಗಂಟೆವರೆಗೆ ಹೋಟೆಲ್ ತೆರೆಯಲು ಅವಕಾಶ ನೀಡಿ ಎಂದು ಹೋಟೆಲ್ ಮಾಲೀಕರ ಸಂಘದಿಂದ ತಮಗೆ ಯಾವುದೇ ಮನವಿ ಬಂದಿಲ್ಲ. ಅವರು ಕೇಳಿಕೊಂಡರೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ನಂತರ ನಿರ್ಧರಿಸಲಾಗುವುದು ಎಂದು ತಿಳಿಸಿದರು.

Translate »