ತುಳಸಿದಾಸಪ್ಪ ಆಸ್ಪತ್ರೆ ಸ್ಥಳದಲ್ಲಿ ಹೈಟೆಕ್ ಹೆರಿಗೆ ಆಸ್ಪತ್ರೆ
ಮೈಸೂರು

ತುಳಸಿದಾಸಪ್ಪ ಆಸ್ಪತ್ರೆ ಸ್ಥಳದಲ್ಲಿ ಹೈಟೆಕ್ ಹೆರಿಗೆ ಆಸ್ಪತ್ರೆ

November 8, 2018

ಮೈಸೂರು: ಮೈಸೂರು ಸೇರಿ ದಂತೆ ಸುತ್ತಮುತ್ತಲಿನ ಸಾವಿರಾರು ಮಂದಿ ಜನ್ಮ ತಳೆದಿದ್ದ ಸೇಟ್ ಮೋಹನ್‍ದಾಸ್ ತುಳಸಿ ದಾಸಪ್ಪ ಆಸ್ಪತ್ರೆಯನ್ನು ನೆಲಸಮಗೊಳಿಸಲಾಗಿದ್ದು, ಅದೇ ಸ್ಥಳದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳ ಹೈಟೆಕ್ ಹೆರಿಗೆ ಆಸ್ಪತ್ರೆ ತಲೆ ಎತ್ತಲಿದೆ.

ಜೆಎಲ್‍ಬಿ ರಸ್ತೆಯಲ್ಲಿ 1949ರ ಜುಲೈ 9ರಂದು ರಾಜ ಮನೆತನದ ಜಯಚಾಮರಾಜೇಂದ್ರ ಒಡೆಯರ್ ಅವರು ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಿದ್ದ ಸೇಟ್ ಮೋಹನ್ ದಾಸ್ ತುಳಸಿದಾಸಪ್ಪ ಆಸ್ಪತ್ರೆ ಕಟ್ಟಡ ಇತ್ತೀಚೆಗೆ ಶಿಥಿಲ ಗೊಂಡಿದ್ದರಿಂದ ತೆರವುಗೊಳಿಸಿ, ಅದೇ ಸ್ಥಳದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಹೈಟೆಕ್ ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. 16.50 ಕೋಟಿ ರೂ.ಗಳನ್ನು ಕಟ್ಟಡದ ಕಾಮಗಾರಿಗೆ ಹಾಗೂ 3.50 ಕೋಟಿ ರೂ. ಗಳನ್ನು ಆಸ್ಪತ್ರೆಗೆ ಉಪಕರಣಗಳ ಖರೀದಿಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ.

ನೆಲಸಮ: ಕಳೆದ 69 ವರ್ಷಗಳಿಂದ ಸಾವಿ ರಾರು ಹೆರಿಗೆಗೆ ಸಾಕ್ಷಿಯಾಗಿ ಭಾವನಾತ್ಮಕ ಬಾಂಧವ್ಯಕ್ಕೆ ಒಳಗಾಗಿದ್ದ ಆಸ್ಪತ್ರೆಯ ಕಟ್ಟಡ ವನ್ನು ಕಳೆದ 10 ದಿನಗಳಿಂದ ಹಿಟಾಚಿ ಮೂಲಕ ನೆಲಸಮ ಮಾಡಲಾಗಿದೆ. ಹೊಸ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ನಕ್ಷೆಯಂತೆ ಮಾರ್ಕ್ ಮಾಡುವ ಕಾರ್ಯ ಆರಂಭಿಸಲಾಗಿದ್ದು, ಇನ್ನೆರಡು ದಿನ ದಲ್ಲಿ ಅಡಿಪಾಯ ಕಾಮಗಾರಿ ನಡೆಸಲಾಗುತ್ತದೆ.

ಹೊಸ ಆಸ್ಪತ್ರೆಯ ವಿಸ್ತೀರ್ಣ: ಹೈಟೆಕ್ ಆಸ್ಪತ್ರೆಯನ್ನು 4870.69 ಚದರ ಮೀಟರ್ ವಿಸ್ತೀರ್ಣದಲ್ಲಿ ಕಟ್ಟಲು ನಕ್ಷೆ ಸಿದ್ಧಪಡಿಸಲಾಗಿದೆ. 2275. 59 ಚ.ಮೀಟರ್‍ನಲ್ಲಿ ನೆಲ ಅಂತಸ್ತು, 2335.79 ಚ.ಮೀಟರ್ ವಿಸ್ತೀರ್ಣದಲ್ಲಿ ಮೊದಲನೆ ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತಿದೆ. ಎರಡನೆ ಅಂತಸ್ತಿನಲ್ಲಿ 259.31 ಚ.ಮೀಟರ್ ಕೊಠಡಿ ಯೊಂದನ್ನು ನಿರ್ಮಿಸಲಾಗುತ್ತದೆ. ಈ ಕೊಠಡಿ ಹೊರತುಪಡಿಸಿ ನೆಲ ಹಾಗೂ ಮೊದಲ ಅಂತಸ್ತು ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗೆ, ಹೆರಿಗೆ, ಬಾಣಂತಿಯರ ಚಿಕಿತ್ಸೆಗೆ ಲಭ್ಯವಾಗಲಿದೆ.

ಏನೇನು: ನೆಲ ಅಂತಸ್ತಿನ 2275.59 ಚ. ಮೀಟರ್ ಕಟ್ಟಡದಲ್ಲಿ ಹೊರರೋಗಿಗಳ ವಿಭಾಗ, ಹಿರಿಯ ನಾಗರಿಕರ ಚಿಕಿತ್ಸಾ ಕೊಠಡಿ, ಕ್ಷ-ಕಿರಣ, ಅಲ್ಟ್ರಾ ಸೌಂಡ್, ಔಷಧ ಉಗ್ರಾಣ ಮತ್ತು ವಿತರಣಾ ಕೊಠಡಿ, ಪ್ರಯೋಗಾಲಯ, ರಕ್ತನಿಧಿ ಕೇಂದ್ರ, ಮೇಜರ್ ಓ.ಟಿ, ಹೊರ ರೋಗಿಗಳ ದಾಖಲಾತಿ ಕೊಠಡಿ, ರ್ಯಾಂಪ್ ನಿರ್ಮಾಣ, ತಲಾ 6 ಹಾಸಿಗೆಯುಳ್ಳ 9 ವಾರ್ಡ್ ಗಳು, ಹೆರಿಗೆ ವಿಭಾಗ, ಎಕ್ಲಂಷಿಯಾ, ಆಟೋ ಕ್ಲೇವ್, ಸ್ಟರೈಲ್ ಸ್ಟೋರ್, ಶವಾಗಾರ, ಬೆಂಕಿ ಅವಘಡಗಳ ತಪ್ಪಿಸುವಿಕೆಯ ಮುಂಜಾಗ್ರತಾ ಕೊಠಡಿ, ಎಸ್.ಟಿ.ಪಿ, ಬೋರ್‍ವೆಲ್, 15 ಕೆವಿ ಸಾಮಥ್ರ್ಯದ ಜನರೇಟರ್ ಅಳವಡಿಕೆ, ಮಳೆ ನೀರಿನ ಸಂಗ್ರಹಣಾ ಘಟಕವನ್ನು ನಿರ್ಮಿಸ ಲಾಗುತ್ತದೆ. ಮೊದಲನೆ ಅಂತಸ್ತಿನ 2335.79 ಚ.ಮೀಟರ್ ವಿಸ್ತೀರ್ಣದ ಕಟ್ಟಡದಲ್ಲಿ ತಲಾ 6 ಹಾಸಿಗೆಯುಳ್ಳ 9 ವಾರ್ಡ್‍ಗಳು, ಮಕ್ಕಳ ತಜ್ಞರ ಕೊಠಡಿ, ಇಮ್ಯೂನೈಸೇಷನ್, ಮೈನರ್ ಹಾಗೂ ಮೇಜರ್ ಓ.ಟಿ, ಹಿರಿಯ ನಾಗರಿಕರ ಚಿಕಿತ್ಸಾ ಕೇಂದ್ರ, ಹೊರರೋಗಿಗಳ ವಿಭಾಗ, ಮೀಟಿಂಗ್ ಹಾಲ್, ಕಚೇರಿ, ಸ್ಟಾಫ್ ರೂಮ್, ಆಡಳಿತಾಧಿಕಾರಿಗಳ ಕೊಠಡಿ, ಕರ್ತವ್ಯನಿರತ ವೈದ್ಯರ ಕೊಠಡಿ, ದಾದಿಯರ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ.

Translate »