ಕಸಕ್ಕಿಂತ ಬುಟ್ಟಿಯೇ ಅಧಿಕ: ಚಾಮರಾಜಪುರಂ ರೈಲು ನಿಲ್ದಾಣ ಅಚ್ಚರಿ
ಮೈಸೂರು

ಕಸಕ್ಕಿಂತ ಬುಟ್ಟಿಯೇ ಅಧಿಕ: ಚಾಮರಾಜಪುರಂ ರೈಲು ನಿಲ್ದಾಣ ಅಚ್ಚರಿ

November 8, 2018

ಮೈಸೂರು: ಕಸಕ್ಕಿಂತ ಕಸದ ಬುಟ್ಟಿಗಳೇ ಹೆಚ್ಚಿದ್ದರೆ? ಅದರಿಂದ ಶುಚಿತ್ವ ಕಾಪಾಡಲು ಸಾಧ್ಯವೇ? ಎಂಬ ಪ್ರಶ್ನೆ ಮೈಸೂರಿನ ಚಾಮರಾಜಪುರಂ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುತ್ತಿದ್ದಂತೆ ಉದ್ಭವಿಸಿದರೆ ಅಚ್ಚರಿಯೇನಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ಕಸದ ಬುಟ್ಟಿಗಳು ಕಣ್ಣಿಗೆ ರಾಚುತ್ತವೆ!

ತಿಳಿ ನೀಲಿ ಹಾಗೂ ಗಾಢ ನೀಲಿ ಬುಟ್ಟಿ ಗಳು ಹೆಜ್ಜೆ ಹೆಜ್ಜೆಗೂ ಗೋಚರಿಸುತ್ತವೆ. ಈ ಎರಡು ಬಣ್ಣಗಳ ಒಂದು ಜೊತೆ ಕಸದ ಬುಟ್ಟಿಗಳನ್ನು ತೂಗು ಹಾಕುವ ಮಾದರಿಯಲ್ಲಿ ನಿಲ್ದಾಣದ ಒಳ-ಹೊರಗೆ ಅಲ್ಲಲ್ಲಿ ಅಳವಡಿಸಲಾಗಿದೆ. ಇಷ್ಟೊಂದು ಸಂಖ್ಯೆ ಯಲ್ಲಿ ಕಸದ ಬುಟ್ಟಿ ಹಾಕುವುದು ಅನಗತ್ಯ ಎಂಬ ಅಭಿಪ್ರಾಯ ಪ್ರಯಾಣಿಕರದ್ದು.

ಆದರೆ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡು ತ್ತಾರೆ ರೈಲ್ವೆ ಸಿಬ್ಬಂದಿ. ಅವರ ಪ್ರಕಾರ ರೈಲ್ವೆ ನಿಲ್ದಾಣದ ಶುಚಿತ್ವ ಕಾಪಾಡಲು ಎಷ್ಟು ಕಸದ ಬುಟ್ಟಿಗಳನ್ನು ಹಾಕಿದರೂ ಸಾಲದಂತೆ. ಸದ್ಯ ಇಲ್ಲಿ ಅಳವಡಿಸಿದ್ದರೂ ಅಗತ್ಯ ಕಂಡು ಬರುವ ನಿಲ್ದಾಣಗಳಿಗೆ ಅವುಗಳನ್ನು ಸ್ಥಳಾಂತರ ಮಾಡಲಾಗುತ್ತದೆ ಎನ್ನುತ್ತಾರೆ ಹೆಸರೇಳಲಿಚ್ಛಿಸದ ಇಲ್ಲಿನ ರೈಲ್ವೆ ಸಿಬ್ಬಂದಿ. ಅಗತ್ಯಕ್ಕೆ ಅನುಗುಣವಾಗಿ ಕಸದ ಬುಟ್ಟಿಗಳನ್ನು ಅಳವಡಿಸಿದರೆ ಅನು ಕೂಲ. ಅನವಶ್ಯಕವಾಗಿ ಎಲ್ಲೆಂದರಲ್ಲಿ ಈ ರೀತಿ ಅಳವಡಿಸಿದರೆ ನಿರ್ವಹಣೆ ಸಾಧ್ಯವೇ ಎಂಬುದು ಪ್ರಯಾಣಿಕರ ಪ್ರಶ್ನೆ. ಪರಿ ಶೀಲಿಸಿದರೆ ಬಹುತೇಕ ಕಸದ ಬುಟ್ಟಿಗಳು ಬರಿದಾಗಿರುವುದು ಗೋಚರಿಸುತ್ತದೆ.

ಎರಡು ಬಣ್ಣದ ಬುಟ್ಟಿಗಳು: ಸಿಎಸ್‍ಆರ್ (ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ) ಅಡಿ ಯಲ್ಲಿ ಈ ಕಸದ ಬುಟ್ಟಿಗಳನ್ನು ಕೊಡಲಾಗಿದೆ. ಆದರೆ ಯಾವ ಬಗೆಯ ಕಸವನ್ನು ಯಾವುದಕ್ಕೆ ಹಾಕಬೇಕೆಂಬ ಮಾಹಿತಿ ಕಂಡುಬರುವುದಿಲ್ಲ. ಅನುಪಯುಕ್ತ ವಾಗಿರುವ ಈ ಕಸದ ಬುಟ್ಟಿಗಳನ್ನು ಅಗತ್ಯವಿರುವ ಸ್ಥಳಗಳಿಗೆ ಅಳವಡಿಸಲು ಸಂಬಂಧಿಸಿದವರು ಕ್ರಮ ವಹಿಸಬೇಕಿದೆ.

ಮೈಸೂರು ನಗರದ ಮುಖ್ಯ ರೈಲ್ವೆ ನಿಲ್ದಾಣದಿಂದ 1 ಕಿ.ಮೀ. ದೂರದಲ್ಲಿ ಈ ರೈಲ್ವೆ ನಿಲ್ದಾಣವಿದೆ. ಕೆಜಿ ಕೊಪ್ಪಲಿನಲ್ಲಿರುವ ಈ ನಿಲ್ದಾಣದಲ್ಲಿ ದಿನಕ್ಕೆ ಐದಾರು ರೈಲುಗಳು ಸಂಚರಿಸುತ್ತವೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಹೆಚ್ಚಿನ ಪ್ರಯಾಣಿಕರು ಕಂಡುಬಂದರೆ, ಉಳಿದ ಸಮಯದಲ್ಲಿ ರೈಲ್ವೆ ನಿಲ್ದಾಣ ಭಣಗುಡುತ್ತಿರುತ್ತದೆ. ಹೀಗಿರು ವಾಗ ಹೆಚ್ಚಿನ ಸಂಖ್ಯೆಯ ಕಸದ ಬುಟ್ಟಿಗಳನ್ನು ಅನಗತ್ಯವಾಗಿ ಅಳವಡಿಸಿ, ನಿಲ್ದಾಣದ ಅಂದಕ್ಕೆ ಕುಂದುಂಟು ಮಾಡಲಾಗಿದೆ ಎಂಬುದು ಹಲವು ಪ್ರಯಾಣಿಕರ ಆರೋಪ.
ಇಲ್ಲಿ 150ಕ್ಕೂ ಹೆಚ್ಚು ಕಸದ ಬುಟ್ಟಿ ಗಳನ್ನು ಅಳವಡಿಸಲಾಗಿದ್ದು, ಪ್ರಯಾಣಿ ಕರು ಆಸೀನರಾಗುವ ಬೆಂಚುಗಳ ಎರಡೂ ಬದಿಗಳಲ್ಲಿ ಕೈಗೆ ಸಿಗದಂತೆ ಕಸದ ಬುಟ್ಟಿ ಗಳನ್ನು ಇಡಲಾಗಿದೆ. ಪ್ರಯಾಣಿಕರು ಕಾದು ಕುಳಿತುಕೊಳ್ಳಲು ಕೊಠಡಿಯಲ್ಲಿಯೂ ಎಲ್ಲೆಂದರಲ್ಲಿ ಕಸದ ಬುಟ್ಟಿಗಳನ್ನು ಇಡಲಾಗಿದೆ.

– ಎಂ.ಬಿ.ಪವನ್‍ಮೂರ್ತಿ

Translate »