ಮೈಸೂರು: ಮೈಸೂರಿನ ಚಾಮರಾಜಪುರಂ ರೈಲ್ವೆ ನಿಲ್ದಾಣದ ಆವರಣದಲ್ಲಿ ಅವೈಜ್ಞಾನಿಕವಾಗಿ ಅಳವಡಿಸಲಾಗಿದ್ದ ಹೆಚ್ಚುವರಿ ಕಸದ ಬುಟ್ಟಿಗಳನ್ನು ತೆರವುಗೊಳಿಸಲಾಗಿದೆ.
ತಿಳಿ ನೀಲಿ ಹಾಗೂ ಗಾಢ ನೀಲಿಯ ಕಸದ ಬುಟ್ಟಿಗಳನ್ನು ನಿಲ್ದಾಣದ ಒಳಾವರಣ ಹಾಗೂ ಹೊರಾವರಣದಲ್ಲಿ ಹೆಜ್ಜೆ ಹೆಜ್ಜೆಗೂ ಅಳವಡಿಸಿ ನಿಲ್ದಾಣವೆಲ್ಲಾ ಕಸದ ಬುಟ್ಟಿಮಯವಾಗಿತ್ತು. ಇಂತಹ ಚಿಕ್ಕ ರೈಲ್ವೆ ನಿಲ್ದಾಣಕ್ಕೆ ಈ ಪರಿಯಲ್ಲಿ ಕಸದ ಬುಟ್ಟಿಗಳನ್ನು ಹಾಕಿರುವ ಬಗ್ಗೆ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಸಂಬಂಧ `ಮೈಸೂರು ಮಿತ್ರ’ನ ನ.8ರ ಗುರು ವಾರದ ಸಂಚಿಕೆಯಲ್ಲಿ ಸಚಿತ್ರ ಸುದ್ದಿ ಪ್ರಕಟಿಸಿ, ಗಮನ ಸೆಳೆಯಲಾಗಿತ್ತು. ಜೊತೆಗೆ ‘ಮಿತ್ರ’ನ ಸಹೋದರ ಪತ್ರಿಕೆ `ಸ್ಟಾರ್ ಆಫ್ ಮೈಸೂರ್’ ನಲ್ಲೂ ವಿಸ್ತೃತ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ರೈಲ್ವೆ ಅಧಿಕಾರಿಗಳು ಹೆಚ್ಚುವರಿ ಯಾಗಿ ಉಪಯೋಗಕ್ಕೆ ಬಾರದೇ ಅನಗತ್ಯ ವಾಗಿದ್ದ ಕಸದ ಬುಟ್ಟಿಗಳನ್ನು ತೆರವುಗೊಳಿಸಿದ್ದಾರೆ.