ಮೈಸೂರು ಜಿಲ್ಲಾದ್ಯಂತ ಸಾಕು  ಪ್ರಾಣಿಗಳ ಗಣತಿ ಕಾರ್ಯ ಆರಂಭ
ಮೈಸೂರು

ಮೈಸೂರು ಜಿಲ್ಲಾದ್ಯಂತ ಸಾಕು  ಪ್ರಾಣಿಗಳ ಗಣತಿ ಕಾರ್ಯ ಆರಂಭ

November 8, 2018

ಮೈಸೂರು: ಪ್ರತೀ 5 ವರ್ಷಕ್ಕೊಮ್ಮೆ ನಡೆಸಲಾಗುವ ಸಾಕು ಪ್ರಾಣಿಗಳ ಗಣತಿ ಕಾರ್ಯ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ನವೆಂಬರ್ 1ರಿಂದ ಆರಂಭವಾಗಿದೆ. ಮೈಸೂರು ಮಹಾನಗರ ಪಾಲಿಕೆ ಹಾಗೂ ಪಶು ಸಂಗೋಪನಾ ಇಲಾಖೆ ಆಶ್ರಯದಲ್ಲಿ 20ನೇ ರಾಷ್ಟ್ರೀಯ ಪ್ರಾಣಿ ಗಣತಿ ಯೋಜನೆಯಡಿ ಈ ಕಾರ್ಯ ಆರಂಭಿಸಿದ್ದು, 2019ರ ಜನವರಿ 31 ರಂದು ಮುಕ್ತಾಯಗೊಳ್ಳಲಿದೆ.

ಮೈಸೂರು ನಗರದ 65 ವಾರ್ಡು ಗಳಲ್ಲಿ ಪ್ರತೀ 2 ಸಾವಿರ ಕುಟುಂಬಗಳಿ ಗೊಬ್ಬರಂತೆ 36 ಮಂದಿ ಗಣತಿದಾರರನ್ನು ಪ್ರಾಣಿಗಳ ಗಣತಿ ಕಾರ್ಯಕ್ಕೆ ನಿಯೋಜಿಸ ಲಾಗಿದೆ. ಇದೇ ಮೊದಲ ಬಾರಿಗೆ ಜಿಪಿಎಸ್ ಉಪಕರಣ ಹೊಂದಿರುವ ಟಾಬ್ಲೆಟ್ ಗಳನ್ನು ಗಣತಿದಾರರಿಗೆ ಪೂರೈಸಿದ್ದು, ಸಂಪೂರ್ಣ ಡಿಜಿಟಲೀಕರಣದೊಂದಿಗೆ ಗಣತಿ ಕಾರ್ಯ ನಡೆಸಲಾಗುತ್ತಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ತಿಳಿಸಿದ್ದಾರೆ.

ಗಣತಿದಾರರಿಗೆ ಗುರುತಿನ ಕಾರ್ಡ್ ನೀಡ ಲಾಗಿದ್ದು, ಅವರು ತಮ್ಮ ಮನೆಗಳಿಗೆ ಬಂದಾಗ ಸಾಕು ಪ್ರಾಣಿಗಳ ಮಾಹಿತಿ ಗಳನ್ನು ನೀಡಿ ಸಹಕರಿಸಬೇಕೆಂದು ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ನೋಡಲ್ ಅಧಿಕಾರಿಯಾಗಿದ್ದರೆ, ಮೈಸೂರು ನಗರದಲ್ಲಿ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ನೋಡಲ್ ಅಧಿಕಾರಿಯಾಗಿ ಪ್ರಾಣಿ ಗಣತಿ ಕಾರ್ಯದ ನೇತೃತ್ವ ವಹಿಸಿದ್ದಾರೆ. ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎನ್.ಸಿ.ಸುರೇಶ್, ಮೈಸೂರು ನಗರದಲ್ಲಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಪಶು ಪಾಲನಾ ಇಲಾಖೆ ಇನ್‍ಸ್ಪೆಕ್ಟರ್‍ಗಳು, ಸಹಾಯಕರು, ಮೇಲ್ವಿಚಾರಕರು, ದ್ವಿತೀಯ ದರ್ಜೆ ಸಹಾಯಕರನ್ನು ಗಣತಿದಾರರನ್ನಾಗಿ ನೇಮಿಸಿಕೊಂಡು ಪ್ರಾಣಿ ಗಣತಿ ಬಗ್ಗೆ ಈಗಾಗಲೇ ಅವರಿಗೆ ತರಬೇತಿ ನೀಡಲಾಗಿದೆ. ಮನೆ-ಮನೆಗೆ ತೆರಳಿ ಪ್ರಾಣಿಗಳ ಬಗ್ಗೆ ಮಾಹಿತಿ ಪಡೆದು ಸ್ಥಳದಲ್ಲೇ ಟಾಬ್ಲೆಟ್ ಮೂಲಕ ಅಪ್‍ಲೋಡ್ ಮಾಡಬೇಕಾಗಿದೆ.

ಗಣತಿ ನಡೆಸಿದ ಮನೆ ಬಾಗಿಲ ಬಳಿ ಇಲಾಖೆ ನೀಡಿರುವ ಸ್ಟಿಕ್ಕರ್‍ಗಳನ್ನು ಗಣತಿದಾರರು ಅಂಟಿಸಬೇಕು. ನಾಯಿ, ಬೆಕ್ಕು, ಕುರಿ, ಕೋಳಿ, ಹಸು, ಎಮ್ಮೆ, ಹಂದಿ, ಮೊಲ ಸೇರಿದಂತೆ ಎಲ್ಲಾ ರೀತಿಯ ಸಾಕು ಪ್ರಾಣಿಗಳ ಬಗ್ಗೆ ಸಂಪೂರ್ಣ ವಿವರ ಕಲೆ ಹಾಕಿ ಪೂರೈಸಲು ಸೂಚಿಸಲಾಗಿದೆ. ಪ್ರಾಣಿ ಸಾಕಾಣೆಗೆ ಅವರು ಬಳಸುತ್ತಿರುವ ಸಲಕರಣೆಗಳು, ಸ್ಥಳ, ಅದರ ವಿಸ್ತೀರ್ಣ, ನೀಡುತ್ತಿರುವ ಆಹಾರ, ಆಶ್ರಯ, ಪ್ರಾಣಿಯ ಆರೋಗ್ಯ ಸ್ಥಿತಿ, ಚಿಕಿತ್ಸಾ ಕ್ರಮಗಳ ಬಗ್ಗೆಯೂ ಗಣತಿದಾರರು ಮಾಹಿತಿ ಸಂಗ್ರಹಿಸಬೇಕಾಗಿದೆ.

ಮಾಹಿತಿ ಕಲೆ ಹಾಕಲು ತೆರಳಿದಾಗ ಅಪಾರ್ಟ್‍ಮೆಂಟ್‍ಗಳ ಕೆಲ ನಿವಾಸಿಗಳು ತಾವು ಸಾಕಿರುವ ಪ್ರಾಣಿಗಳ ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಗಣತಿ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ಸಾಕು ಪ್ರಾಣಿಗಳೆಷ್ಟಿವೆ ಎಂಬುದರ ನಿಖರ ಮಾಹಿತಿ ತಿಳಿಯುವುದಿಲ್ಲವಾದ್ದರಿಂದ ನಾಗರಿಕರು, ಗಣತಿದಾರರು ಬಂದಾಗ ಅವರ ಗುರುತಿನ ಚೀಟಿ ನೋಡಿ ಸಹಕರಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಕೋರಿದ್ದಾರೆ.

Translate »