ಗಾಂಧಿ ಸ್ಮರಣೆಯ 27 ಸಿಮೆಂಟ್ ಕಲಾಕೃತಿಗಳ ಅನಾವರಣ
ಮೈಸೂರು

ಗಾಂಧಿ ಸ್ಮರಣೆಯ 27 ಸಿಮೆಂಟ್ ಕಲಾಕೃತಿಗಳ ಅನಾವರಣ

November 8, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಮಹಾತ್ಮ ಗಾಂಧೀಜಿ ಅವರ ಬದುಕಿನ ವಿವಿಧ ಸನ್ನಿವೇಶಗಳ ಸಿಮೆಂಟ್ ಕಲಾಕೃತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಂಗಳವಾರ ಲೋಕಾರ್ಪಣೆ ಮಾಡಿದರು.

ಗಾಂಧೀಜಿಯ 150ನೇ ಜನ್ಮದಿನಾ ಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ರಂಗಾಯಣ ಮತ್ತು ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ರೂಪುಗೊಂಡಿರುವ ಶಿಲ್ಪಕಲಾ ಶಿಬಿರದಲ್ಲಿ 27 ಕಲಾಕೃತಿಗಳನ್ನು ತಯಾರಿಸಲಾಗಿದೆ.

ಮಾನಸಗಂಗೋತ್ರಿಯ ಕ್ಯಾಂಪಸ್ ಪ್ರವೇಶ ದ್ವಾರದ ಬಳಿ ನಿರ್ಮಿಸಿರುವ ದಂಡಿ ಯಾತ್ರೆ (ಸದ್ಭಾವನಾ ಯಾತ್ರೆ)ಯ ಸಿಮೆಂಟ್ ಕಲಾಕೃತಿಗಳು, ಶಾಂತಿ ನಿಕೇತನ ದಲ್ಲಿ ರಾಷ್ಟ್ರಕವಿ ರವೀಂದ್ರ ಠ್ಯಾಗೋರ್ ಮತ್ತು ಗಾಂಧೀಜಿ ಅವರ ಭೇಟಿಯ ಸಂದರ್ಭದ ಕಲಾಕೃತಿ ಹಾಗೂ ಧ್ಯಾನಸ್ಥ ಗಾಂಧೀಜಿ ಅವರ ಕಲಾಕೃತಿಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಚಿವರು ಲೋಕಾರ್ಪಣೆ ಮಾಡಿದರು. ಆ ಮೂಲಕ ಗಾಂಧೀಜಿ ಅವರ ತತ್ವ ಆದರ್ಶಗಳು ಯುವ ಸಮುದಾಯಕ್ಕೆ ಪಸರಿಸುವಂತೆ ಮಾಡಿದರು.

ಬಳಿಕ ಮಾತನಾಡಿ, ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿ ದ್ದರಾದರೂ, ಗಾಂಧೀಜಿಯವರ ಪಾತ್ರ ಪ್ರಮುಖವಾದುದ್ದಾಗಿದೆ. ಸ್ವಾತಂತ್ರ್ಯಾ ನಂತರ ದೇಶದಲ್ಲಿ ಸಮಾನತೆ ನೆಲೆ ಗೊಂಡು, ಪ್ರತಿಯೊಬ್ಬರೂ ವಿದ್ಯಾವಂತರಾಗಿ, ಸ್ವಾವಲಂಬನೆ ಸಾಧಿಸುವುದರೊಂದಿಗೆ ನಮ್ಮ ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂಬ ಕನಸು ಕಂಡಿದ್ದರು. ಅವರ ಸರ್ವೋದಯ ತತ್ವ ಗ್ರಾಮೀಣ ಭಾಗದ ಅಭಿವೃದ್ಧಿಯ ರೂಪರೇಷೆಗಳನ್ನು ಒಳಗೊಂಡಿದೆ. ಇಂತಹ ಮಹಾತ್ಮರ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವ ಸಮೂಹ ತಿಳಿದುಕೊಳ್ಳುವ ಅಗತ್ಯವಿದ್ದು, ಗಾಂಧೀಜಿ ಅವರ 150ನೇ ಜನ್ಮದಿನದ ಹಿನ್ನೆಲೆ 365 ದಿನವೂ ಅವರ ಕುರಿತಾದ ಉಪನ್ಯಾಸ, ಸಂವಾದ ನಡೆಸುವ ಅಗತ್ಯವಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮಾತನಾಡಿ, ಗಾಂಧೀಜಿ ಭಾರತಕ್ಕೆ ಮಾತ್ರ ಸೀಮಿತವಾಗದೆ ವಿಶ್ವ ಗುರುವಾಗಿದ್ದಾರೆ. ಗಾಂಧಿಯನ್ನು ಮರೆತರೆ ವಿಶ್ವನಾಶ ಎಂದು ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಾಹಂ ಲಿಂಕನ್ ಹೇಳಿದರು. ನಮ್ಮಲ್ಲಿ ಗಾಂಧಿ ಹೆಸರಿನ ರಸ್ತೆ, ಪ್ರತಿಮೆಗಳು, ಅಧ್ಯಯನ ಕೇಂದ್ರಗಳಿವೆ. ಗಾಂಧಿ ಹುಟ್ಟಿದ ಗುಜರಾತಿ ನಲ್ಲೂ ಇಷ್ಟು ಕಾರ್ಯಕ್ರಮಗಳು ನಡೆಯು ತ್ತಿಲ್ಲ. ಅಷ್ಟು ಚಟುವಟಿಕೆಗಳು ನಮ್ಮ ರಾಜ್ಯದಲ್ಲಿ ನಡೆಯುತ್ತಿವೆ. ಆದರೆ, ಯುವ ಸಮೂಹ ಮಾತ್ರ ಅವರ ಬಗ್ಗೆ ತಿಳಿಯಲು ಆಸಕ್ತಿ ತೋರುತ್ತಿಲ್ಲ. ಈಗಿನ ದಿನಮಾನ ಗಳಲ್ಲಿ ಗಾಂಧೀಜಿ ಚಿಂತನೆ ಅಗತ್ಯವಾಗಿದ್ದು, ಯುವಸಮೂಹ ಗಾಂಧಿ ಮಾರ್ಗದಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.

ಕಲಾಕೃತಿಗಳು: ಗಾಂಧಿ ಭವನದಲ್ಲಿ ಸಿಮೆಂಟ್‍ನಿಂದ ನಿರ್ಮಿಸಲಾಗಿರುವ 27 ಕಲಾಕೃತಿಗಳಲ್ಲಿ ಹಲವು ವೈಶಿಷ್ಟ್ಯತೆಗಳಿವೆ. ವಿಶ್ವದಲ್ಲಿಯೇ ಎತ್ತರದ ಮಹಾತ್ಮಗಾಂಧಿ ಕಲಾಕೃತಿ(11ಅಡಿ), ಕಸ್ತೂರ್ ಬಾ ಅವ ರೊಂದಿಗಿನ ಗಾಂಧೀಜಿ, ಹತ್ಯೆಗೀಡಾಗುವ ಮುನ್ನ ಮೊಮ್ಮಕ್ಕಳಾದ ಅಬ ಮತ್ತು ಮನು ಅವರೊಂದಿಗೆ ಬರುತ್ತಿರುವ ಗಾಂಧೀಜಿ, ಸಬರ್‍ಮತಿ ಆಶ್ರಮದಲ್ಲಿ ಮಗುವೊಂದನ್ನು ಎತ್ತಿಕೊಳ್ಳುತ್ತಿರುವ ಗಾಂಧೀಜಿ, ಸದ್ಭಾವನಾ ಯಾತ್ರೆಯಲ್ಲಿ ಪಾಲ್ಗೊಂಡಿರುವ ಗಾಂಧೀಜಿ, ಚರಕದಲ್ಲಿ ನೂಲು ಸಿದ್ಧಪಡಿಸುತ್ತಿರುವ ಗಾಂಧೀಜಿ, ಕೋಲು ಹಿಡಿದು ಗಾಂಧೀಜಿ ಅವರನ್ನು ಕರೆದೊಯ್ಯುತ್ತಿರುವ, ರವೀಂದ್ರ ನಾಥ್ ಠ್ಯಾಗೋರ್ ಅವರೊಂದಿಗೆ ಚರ್ಚಿಸುತ್ತಿರುವ ಗಾಂಧೀಜಿ ಸೇರಿದಂತೆ ಗಾಂಧೀಜಿ ಅವರ ಹಲವು ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಎಲ್ಲಾ ಕಲಾಕೃತಿಗಳಿಗೆ ಲೋಹದ ಬಣ್ಣವನ್ನು ಬಳಿಯಲಾಗುತ್ತದೆ.

ಕಾರ್ಯಕ್ರಮದಲ್ಲಿ ಶಾಸಕ ಎಲ್. ನಾಗೇಂದ್ರ, ಮೈಸೂರು ವಿ.ವಿ.ಪ್ರಭಾರ ಕುಲಪತಿ ಆಯಿಷಾ ಎಂ.ಷರೀಫ್, ಕುಲಸಚಿವ ಪ್ರೊ.ಆರ್.ರಾಜಣ್ಣ, ಕರ್ನಾ ಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಶಿಲ್ಪಿ ರು.ಕಾಳಾಚಾರ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೊಡೇ ಪಿ.ಕೃಷ್ಣ, ಉಪಾಧ್ಯಕ್ಷ ಪ್ರೊ.ಜಿ.ಬಿ.ಶಿವರಾಜು, ಗಾಂಧಿ ಮಾರ್ಗಿಗಳಾದ ಪ್ರೊ.ಕೆ.ಟಿ.ವೀರಪ್ಪ, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್, ಜಿಪಂ ಸಿಇಒ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

Translate »