ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ‘ಇ-ಕಾರ್ಟ್’ ಬ್ಯಾಟರಿ ಚಾಲಿತ ವಾಹನ ಸೌಲಭ್ಯ
ಮೈಸೂರು

ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ‘ಇ-ಕಾರ್ಟ್’ ಬ್ಯಾಟರಿ ಚಾಲಿತ ವಾಹನ ಸೌಲಭ್ಯ

January 25, 2020

ಮೈಸೂರು: ಅಚ್ಚ ಹಸಿರಿನ ನೈಸರ್ಗಿಕ ಸೌಂದರ್ಯ ಹೊಂದಿರುವ ಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿ ಇನ್ನು ಮುಂದೆ ಶಬ್ಧ ಹಾಗೂ ವಾಯು ಮಾಲಿನ್ಯ ರಹಿತ ವಾಹನಗಳಲ್ಲಿ ಸಂಚರಿಸಬಹುದು!

ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ವಿಶಾಲ ಪ್ರದೇಶ ಹೊಂದಿ ರುವ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ತೆರಳಲು ಅನುಕೂಲವಾಗು ವಂತೆ ಮೈಸೂರು ವಿಶ್ವವಿದ್ಯಾನಿಲಯವು ಬ್ಯಾಟರಿ ಚಾಲಿತ ‘ಇ-ಕಾರ್ಟ್’ ವಾಹನ ಗಳನ್ನು ಒದಗಿಸಲಿದೆ. ಸಿಸಿ ಕ್ಯಾಮೆರಾ ಹೊಂದಿರುವ ಇ-ಕಾರ್ಟ್‍ಗಳು ಇನ್ನು ಮುಂದೆ ಮಾನಸಗಂಗೋತ್ರಿ ಕ್ಯಾಂಪಸ್ ನಲ್ಲಿ ಸಂಚರಿಸಲಿವೆ.

ಚಾಲಕ ಸೇರಿದಂತೆ 8 ಆಸನ ಸಾಮಥ್ರ್ಯ ವುಳ್ಳ ಎರಡು ಇ-ಕಾರ್ಟ್‍ಗಳನ್ನು ತಲಾ 9 ಲಕ್ಷ ರೂ. ವೆಚ್ಚದಲ್ಲಿ ಖರೀದಿಸ ಲಾಗಿದ್ದು, ಜ. 26ರ ಗಣರಾಜ್ಯೋತ್ಸವ ದಂದು ಸೇವೆಗೆ ಸಮರ್ಪಿಸಲಾಗುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ 8.45 ಗಂಟೆಗೆ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮ ರಾಜ ಒಡೆಯರ್ ಅವರು ಬ್ಯಾಟರಿ ಚಾಲಿತ ವಾಹನಗಳ ಸೇವೆಗೆ ಚಾಲನೆ ನೀಡುವರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜೆ.ಹೇಮಂತಕುಮಾರ್ ಕಾರ್ಯ ಕ್ರಮದಲ್ಲಿ ಅಧ್ಯಕ್ಷತೆ ವಹಿಸಲಿದ್ದು, ಕುಲಸಚಿವ ಆರ್.ಶಿವಪ್ಪ ಸೇರಿದಂತೆ ಹಲವರು ಭಾಗ ವಹಿಸುವರು. ಕ್ಯಾಂಪಸ್‍ನ ದಕ್ಷಿಣ ದ್ವಾರದ ರಾಷ್ಟ್ರಕವಿ ಕುವೆಂಪು ಪ್ರತಿಮೆ ಬಳಿ ಒಂದು ಹಾಗೂ ಪಶ್ಚಿಮ ಭಾಗದ ಜೆಸಿಇ ಕ್ಯಾಂಪಸ್ ಕಡೆಯ ದ್ವಾರದ ಬಳಿ ಮತ್ತೊಂದು ಇ-ಕಾರ್ಟ್ ವಾಹನ ಇರುತ್ತವೆ. 2 ಕಿಮೀ ಅಂತರದವರೆಗೆ ಒಂದು ಪಾಯಿಂಟ್‍ನಿಂದ ಮತ್ತೊಂದು ಪಾಯಿಂಟ್‍ಗೆ 5 ರೂ. ಹಾಗೂ ಮುಂದುವರೆದ ಪ್ರಯಾಣಕ್ಕೆ ಪ್ರತಿ ಪಾಯಿಂಟ್‍ಗೆ ತಲಾ 3 ರೂ.ನಂತೆ ಪ್ರಯಾಣ ದರ ನಿಗದಿಪಡಿಸಲು ಉದ್ದೇಶಿಸಲಾಗಿದೆ. ವಾಹನಗಳ ನಿರ್ವಹಣೆ ಜವಾಬ್ದಾರಿ ಯನ್ನು ಟೆಂಡರ್ ಮೂಲಕ ಖಾಸಗಿ ಯವರಿಗೆ ಒಪ್ಪಿಸಲು ಚಿಂತನೆ ನಡೆಸಿದ್ದೇವೆ ಎಂದು ಕುಲಪತಿ ಪ್ರೊ.ಹೇಮಂತ್ ಕುಮಾರ್ ವಿವರಿಸಿದರು.

ಆರು ದಿನ ಉಚಿತ: ಫೆಬ್ರವರಿ 1 ರಿಂದ ಶುಲ್ಕ ಸಹಿತ ಬ್ಯಾಟರಿ ಚಾಲಿತ ವಾಹನ ಗಳ ಸೇವೆ ಆರಂಭಿಸಲಿದ್ದು, ಅಲ್ಲಿಯ ವರೆಗೆ ಪ್ರಾಯೋಗಿಕವಾಗಿ ಉಚಿತ ಸೇವೆ ಒದಗಿಸಲಾಗುವುದು ಎಂದೂ ತಿಳಿಸಿದರು.

Translate »