ಶಾಲಾ ಕಾಲೇಜಲ್ಲಿ ಹಿಜಾಬ್ ನಿಷೇಧ ಸರ್ಕಾರದ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
News

ಶಾಲಾ ಕಾಲೇಜಲ್ಲಿ ಹಿಜಾಬ್ ನಿಷೇಧ ಸರ್ಕಾರದ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್

March 16, 2022

ಬೆಂಗಳೂರು, ಮಾ.15(ಕೆಎಂಶಿ)- ಹಿಜಾಬ್ ಸೇರಿದಂತೆ ಧಾರ್ಮಿಕ ಸಂಕೇತ ಬಿಂಬಿಸುವ ವಸ್ತ್ರಗಳಿಗೆ ತರಗತಿಯೊಳಗೆ ಅವಕಾಶ ಇಲ್ಲ ಎಂದು ಕರ್ನಾಟಕ ಹೈ ಕೋರ್ಟ್ ಇಂದಿಲ್ಲಿ ಮಹತ್ವದ ತೀರ್ಪು ನೀಡಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶವನ್ನು ಎತ್ತಿಹಿಡಿದಿರುವುದಲ್ಲದೆ, ಹಿಜಾಬ್ ಸಮರ್ಥಿಸಿಕೊಂಡು ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದೆ.

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದ ಆಲಿಸಿ ಕಾಯ್ದಿರಿಸಿದ ತೀರ್ಪನ್ನು ಹೈಕೋರ್ಟ್ ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯ ಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಹಾಗೂ ಖಾಜಿ ಜೈಬುನ್ನೀಸಾ ಮೊಹಿದ್ದೀನ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಸರ್ಕಾರ ಸಮವಸ್ತ್ರ ಸಂಹಿತೆ ನಿಗದಿ ಮಾಡಿದ ಆದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿ ದ್ದಲ್ಲದೆ, ನಾಲ್ಕು ಪ್ರಮುಖ ಪ್ರಶ್ನೆಗಳಿಗೆ ಸವಿಸ್ತಾರ ವಾಗಿ ತೀರ್ಪು ನೀಡಿದೆ.

ವಿವಾದಕ್ಕೆ ಸಂಬಂಧಿಸಿದಂತೆ 11 ದಿನಗಳ ಕಾಲ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾ ಲಯ ಇಂದು ಬೆಳಗ್ಗೆ 8 ನಿಮಿಷಗಳಲ್ಲಿ 129 ಪುಟಗಳ ತೀರ್ಪಿನ ಸಾರಾಂಶವನ್ನು ಪ್ರಕಟಿಸಿತು. ಈ ಸಂದರ್ಭದಲ್ಲೇ ನ್ಯಾಯ ಮೂರ್ತಿಗಳ ಪೀಠ, ಹಿಜಾಬ್ ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆ ಅಲ್ಲ. ಇಸ್ಲಾಂ ನಲ್ಲಿನ ನಂಬಿಕೆಯಂತೆ ಮುಸ್ಲಿಂ ಮಹಿಳೆ ಯರು ಹಿಜಾಬ್ ಧರಿಸುವುದು ಕಡ್ಡಾಯ ಧಾರ್ಮಿಕ ಆಚರಣೆ ಆಗಿರುವುದಿಲ್ಲ. ನಮ್ಮ ಅಭಿಪ್ರಾಯದಂತೆ
ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ನಿಗದಿ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ, ಕೆಲವೊಂದು ವಿಚಾರಗಳಲ್ಲಿ ನಿರ್ಬಂಧ ವಿಧಿಸಲು ಸರ್ಕಾರಕ್ಕೆ ಸಂವಿಧಾ ನಾತ್ಮಕ ಹಕ್ಕಿದೆ, ಇದನ್ನು ವಿದ್ಯಾರ್ಥಿಗಳು ಆಕ್ಷೇಪಿಸಬಾರದು. ಸಮವಸ್ತ್ರ ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕಿದೆ, ಅದರಂತೆ 2022, ಫೆಬ್ರವರಿ 5ರ ಆದೇಶವನ್ನು ಅಸಿಂಧುಗೊಳಿಸುವ ಯಾವುದೇ ಕಾನೂನಾತ್ಮಕ ಅಂಶಗಳಿಲ್ಲ. ಶಿಕ್ಷಣ ಸಂಸ್ಥೆಗಳ ವಿರುದ್ಧ ವಿಚಾರಣೆ ನಡೆಸುವಂತೆ ಹಾಗೂ ಸಮವಸ್ತ್ರ ಸಂಹಿತೆ ಹೇರದಂತೆ ನಿರ್ದೇಶನ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ನ್ಯಾಯಾಲಯ ಪರಿಗಣಿಸಲಾಗದು, ಆದ್ದರಿಂದ ಕಾಲೇಜಿನ ವಿರುದ್ಧ ಯಾವುದೇ ನಿರ್ದೇಶನ ನೀಡುವ ಅಗತ್ಯವಿಲ್ಲ. ಅರ್ಜಿಯಲ್ಲಿ ಎದುರಾದ ನಾಲ್ಕು ಪ್ರಶ್ನೆಗಳಿಗೂ ಉತ್ತರ ನಕಾರಾತ್ಮಕವಾಗಿ ಕಂಡುಬಂದಿವೆ, ಆದ್ದರಿಂದ ಎಲ್ಲ ಅರ್ಜಿಗಳನ್ನು ವಜಾಗೊಳಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪ್ರಕಟಿಸಿತು.

ಹಿಜಾಬ್ ವಿಷಯ ದೇಶಾದ್ಯಂತ ವಿವಾದವನ್ನಾಗಿಸಿದ ಹಿಂದೆ ಕಾಣದ ಕೈಗಳು ಅಡಗಿವೆ ಎಂಬ ಬಲವಾದ ಸಂಶಯವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ. ಸಮವಸ್ತ್ರ ಸಂಹಿತೆ ಕುರಿತಂತೆ ಸರ್ಕಾರ ಕಳೆದ ಫೆಬ್ರವರಿ 5ರಂದು ಸುತ್ತೋಲೆ ಹೊರಡಿಸುವುದಕ್ಕೂ ಮುನ್ನವೇ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಆರು ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿ ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕೆಂದು ಕೋರಿದ್ದರು.

ಇದನ್ನು ಗಮನಿಸಿದಾಗ 2021ರ ಡಿಸೆಂಬರ್ ಮೊದಲ ವಾರದಲ್ಲೇ ಈ ಕಾಲೇಜಿನಲ್ಲಿ ಹಿಜಾಬ್ ಕುರಿತಂತೆ ಹುನ್ನಾರ ರೂಪಿಸುವ ಪ್ರಯತ್ನ ನಡೆದಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಬೇರೆ ವಿದ್ಯಾರ್ಥಿನಿಯರು ಹಿಜಾಬ್ ಕುರಿತಂತೆ ಪ್ರಸ್ತಾಪ ಮಾಡದಿರುವ ಸನ್ನಿವೇಶದಲ್ಲಿ ಅರ್ಜಿದಾರ ವಿದ್ಯಾರ್ಥಿನಿಯರು ಮಾತ್ರವೇ ಈ ಕುರಿತಂತೆ ವಿವಾದ ಎಬ್ಬಿಸಲು ಮುಂದಾಗಿರುವುದು ಸಂಶಯಕ್ಕೆ ಆಸ್ಪದವಾಗಿದೆ.

ಈ ಸಂಶಯದ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹಾಗೂ ಜಮಾತೆ ಇಸ್ಲಾಂನಂತಹ ಸಂಘಟನೆಗಳ ಕೈವಾಡ ಕಂಡುಬರುತ್ತಿದೆ.

ಈ ಸಂಘಟನೆಗಳ ಮುಖ್ಯಸ್ಥರು ಅರ್ಜಿದಾರ ವಿದ್ಯಾರ್ಥಿನಿಯರ ಕಾಲೇಜಿನ ಪ್ರಾಂಶುಪಾಲರಿಗೆ ಬೆದರಿಕೆ ಹಾಕಿ ದಾಂಧಲೆ ಎಬ್ಬಿಸಿರುವುದನ್ನು ಗಮನಿಸಿದರೆ ಇವೆಲ್ಲಾ ಪೂರ್ವ ನಿಯೋಜಿತ ಕೃತ್ಯ ಎಂಬುದಾಗಿ ವೇದ್ಯವಾಗುತ್ತದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ನಡೆಯುತ್ತಿದ್ದು, ಈ ವಿಷಯದಲ್ಲಿ ಸಂಯಮ ಕಾಯ್ದುಕೊಂಡು ಹೋಗಲು ಪೀಠ ಬಯಸುತ್ತದೆ. ಹಿಜಾಬ್ ನಿರ್ಬಂಧಿಸಿರುವುದು ಅರ್ಜಿದಾರರ ಧಾರ್ಮಿಕ ಮತ್ತು ಖಾಸಗೀತನ ಸ್ವಾತಂತ್ರ್ಯದ ಉಲ್ಲಂಘನೆ ಎಂಬ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ಮೇಲು-ಕೀಳು, ಬಡವ-ಶ್ರೀಮಂತ ಎಂಬ ತಾರತಮ್ಯಗಳನ್ನು ತೊರೆದು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದಲೇ ಸಮವಸ್ತ್ರ ಸಂಹಿತೆ ತರಲಾಗಿದೆ.

ಧಾರ್ಮಿಕ ಆಚರಣೆ ಬಗ್ಗೆ ಸಂವಿಧಾನದ 25ನೇ ವಿಧಿಯು ವಿವರಿಸುತ್ತದೆ. ಆದರೆ, ಅತ್ಯಾವಶ್ಯಕ ಧಾರ್ಮಿಕ ಆಚರಣೆ ಬಗ್ಗೆ ಹೇಳಿಲ್ಲ ಎಂದು ಅನೇಕ ಪ್ರಕರಣಗಳ ಬಗ್ಗೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಕುರಾನ್‍ನಲ್ಲಿ ಅನೇಕ ಪ್ರಕಾರದ ವ್ಯಾಖ್ಯಾನಗಳಿವೆ, ಯಾವ ವ್ಯಾಖ್ಯಾನಗಳನ್ನು ಒಪ್ಪಬೇಕು ಎಂಬ ಪ್ರಶ್ನೆ ಎದುರಾದಾಗ, ಅಬ್ದುಲ್ಲಾ ಯೂಸುಫ್ ಅಲಿ ಅವರು ಭಾಷಾಂತರ ಮಾಡಿರುವ ಕುರಾನ್‍ನಲ್ಲಿ ಎಲ್ಲೂ ಕೂಡಾ ಹಿಜಾಬ್ ಪ್ರಸ್ತಾಪವೇ ಇಲ್ಲ ಎಂಬ ಅಂಶವನ್ನು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.

Translate »