ಮಂಡಿ ಮೊಹಲ್ಲಾ, ಎನ್.ಆರ್.ಮೊಹಲ್ಲಾ, ಉದಯಗಿರಿ ಭಾಗಗಳಲ್ಲಿ ಸ್ವಯಂಪ್ರೇರಣೆಯಿಂದ ಅಂಗಡಿ ಮುಂಗಟ್ಟು, ವಾಣಿಜ್ಯ ವಹಿವಾಟು ಬಂದ್ ಮಾಡಿ ಶಾಂತಿಯುತ ಪ್ರತಿರೋಧ
ಮೈಸೂರು, ಮಾ. 17 (ಆರ್‍ಕೆ)- ಹಿಜಾಬ್ ನಿರ್ಬಂಧ ಆಕ್ಷೇಪಿಸಿ ಮುಸ್ಲಿಂ ಸಮುದಾಯದ ಮುಖಂಡರು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಡಿ, ಎನ್.ಆರ್., ಲಷ್ಕರ್ ಮೊಹಲ್ಲಾ, ಉದಯ ಗಿರಿ, ಕಲ್ಯಾಣಗಿರಿ, ರಾಜೀವನಗರ, ಬೀಡಿ ಕಾರ್ಮಿಕರ ಕಾಲೋನಿ ಹಾಗೂ ಸುತ್ತ ಮುತ್ತಲ ಬಡಾವಣೆಗಳಲ್ಲಿ ಮಾತ್ರ ಮುಸ್ಲಿಂ ಸಮುದಾಯದ ವರ್ತಕರು ಅಂಗಡಿ ಮುಂಗಟ್ಟು, ವಾಣಿಜ್ಯ ವಹಿವಾಟುಗಳನ್ನು ಬಂದ್ ಮಾಡಿದ್ದರು.
ಎಲ್ಲರೂ ಸ್ವಯಂಪ್ರೇರಿತರಾಗಿ ಅಂಗಡಿ ಬಂದ್ ಮಾಡಿದ್ದರಲ್ಲದೆ, ಮೈಸೂರು ನಗರದಾದ್ಯಂತ ಸೆಕ್ಷನ್ 144 ರೀತ್ಯಾ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆ, ಮೆರವಣಿಗೆ, ಸಭೆ, ಸಮಾರಂಭಗಳು ನಡೆಯಲಿಲ್ಲ. ಬಂದ್‍ಗೆ ಬೆಂಬಲಿಸಲಿಚ್ಛಿಸು ವವರು ಕೇವಲ ತಮ್ಮ ಅಂಗಡಿ ಬಾಗಿಲು ಬಂದ್ ಮಾಡಿಕೊಂಡರೆ ಹೊರತು, ಬೇರೆಯ ವರಿಗೆ ಒತ್ತಾಯ ಹೇರಲಿಲ್ಲ. ವಾಣಿಜ್ಯ ವಹಿವಾಟುಗಳನ್ನು ಹೊರತುಪಡಿಸಿ ಉಳಿದಂತೆ ಆಟೋ, ಟ್ಯಾಕ್ಸಿ, ಕಾರು, ಬಸ್ಸು, ಸರಕು ಸಾಗಣೆ ವಾಹನಗಳ ಸಂಚಾರ ಎಂದಿನಂತಿತ್ತು.
ಹೋಟೆಲ್, ಸಿನಿಮಾ ಮಂದಿರ, ಮಾರುಕಟ್ಟೆ, ಮಾಲ್‍ಗಳು, ವಾಣಿಜ್ಯ ಕೇಂದ್ರಗಳು, ಪ್ರವಾಸಿ ಕೇಂದ್ರಗಳಲ್ಲಿ ಚಟುವಟಿಕೆಗಳು ಮಾಮೂಲಿನಂತಿತ್ತು. ಮಂಡಿಮೊಹಲ್ಲಾ, ಲಷ್ಕರ್ ಮೊಹಲ್ಲಾದ ಕೆಲ ಭಾಗ, ಎನ್.ಆರ್.ಮೊಹಲ್ಲಾ, ಉದಯಗಿರಿ ಮುಖ್ಯ ರಸ್ತೆ, ಕಲ್ಯಾಣಗಿರಿ ನಗರಗಳಲ್ಲಿ ಮಾತ್ರ ಶೇ.90ರಷ್ಟು ಅಂಗಡಿಗಳು ಬಂದ್ ಆಗಿದ್ದವು. ಮುಂಜಾಗ್ರತಾ ಕ್ರಮವಾಗಿ ಮಂಡಿ, ಎನ್.ಆರ್., ಉದಯಗಿರಿ ಠಾಣಾ ವ್ಯಾಪ್ತಿ ಸೇರಿದಂತೆ ನಗರದಾದ್ಯಂತ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸ್ ಕಮೀಷನರ್ ಡಾ.ಚಂದ್ರಗುಪ್ತ ತಿಳಿಸಿದರು. ಉಳಿದಂತೆ ಕೆ.ಆರ್. ಸರ್ಕಲ್, ಮಕ್ಕಾಜಿ ಚೌಕ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಬಿ.ಎನ್. ರಸ್ತೆ, ಇರ್ವಿನ್ ರಸ್ತೆ, ಧನ್ವಂತರಿ ರಸ್ತೆ, ಜೆಎಲ್‍ಬಿ ರಸ್ತೆ, ಎಂ.ಜಿ. ರಸ್ತೆ ಸೇರಿದಂತೆ ಮೈಸೂರು ನಗರದಾದ್ಯಂತ ಎಲ್ಲಾ ಚಟುವಟಿಕೆಗಳು ಎಂದಿನಂತೆ ನಡೆದವು.