ಹುಯಿಲಾಳು ಗ್ರಾಮದಲ್ಲಿ ಮನೆಗೆ ಬೆಂಕಿ
ಮೈಸೂರು

ಹುಯಿಲಾಳು ಗ್ರಾಮದಲ್ಲಿ ಮನೆಗೆ ಬೆಂಕಿ

December 4, 2020

ಮೈಸೂರು,ಡಿ.3(ಆರ್‍ಕೆ)-ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯೊಂದು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಮೈಸೂರು ತಾಲೂಕು ಹುಯಿಲಾಳು ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಗ್ರಾಮದ ದೊಡ್ಡೇಗೌಡರ ಮಗ ಶಿವಣ್ಣ ಅವರ ಹೆಂಚಿನ ಮನೆ ಅಗ್ನಿಗಾಹುತಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಶಿವಣ್ಣ ಅವರ ಕುಟುಂಬದ ಸದಸ್ಯರೆಲ್ಲರೂ ಕೊಟ್ಟಿಗೆ ಬಳಿ ಇದ್ದ ವೇಳೆ ಅಪರಾಹ್ನ 12 ಗಂಟೆ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ, ಬೆಂಕಿ ನಂದಿಸಿದರು. ಇಲವಾಲ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು. ಬೆಂಕಿಗೆ ಸುಮಾರು ನಾಲ್ಕೂವರೆ ಲಕ್ಷ ರೂ. ಬೆಲೆಬಾಳುವ ಮನೆ ಸುಟ್ಟು ಹೋಗಿದೆ ಎಂದು ಅಂದಾಜಿಸಲಾಗಿದೆ. ಕಂದಾಯ ಇಲಾಖೆ, ಗ್ರಾಮ ಪಂಚಾಯ್ತಿ ಅಧಿಕಾರಿಗಳೂ ಹುಯಿಲಾಳು ಗ್ರಾಮಕ್ಕೆ ಭೇಟಿ ನೀಡಿ, ಮಹಜರು ನಡೆಸಿದರು.

Translate »