ಹನಿಟ್ರ್ಯಾಪ್ ಪ್ರಕರಣ: ಮೈಸೂರಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗದಿಂದ ವಿಚಾರಣೆ
ಮೈಸೂರು

ಹನಿಟ್ರ್ಯಾಪ್ ಪ್ರಕರಣ: ಮೈಸೂರಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗದಿಂದ ವಿಚಾರಣೆ

July 19, 2018

ಮೈಸೂರು:  2017ರ ಆಗಸ್ಟ್ ಮಾಹೆಯಲ್ಲಿ ನಡೆದಿದ್ದ ಹನಿಟ್ರ್ಯಾಪ್ ಪ್ರಕರಣದ ಸತ್ಯಾಸತ್ಯತೆ ಅರಿಯಲು ರಾಷ್ಟ್ರೀಯ ಮಾನವ ಹಕ್ಕು ಆಯೋಗ(nhrc)ದ ಅಧಿಕಾರಿಗಳು ಮೈಸೂರಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಹನಿಟ್ರ್ಯಾಪ್ ನಡೆಸಿದರೆಂಬ ಮಾಹಿತಿ ಆಧರಿಸಿ 2017ರ ಆಗಸ್ಟ್ 25ರಂದು ಮೈಸೂರಿನ ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ಯುವತಿಯೋರ್ವಳ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣದ ಹಿನ್ನೆಲೆಯಲ್ಲಿ ಯುವತಿ ಸೇರಿ ಮೂವರನ್ನು ವಶಕ್ಕೆ ಪಡೆದಿದ್ದರು.

ತದನಂತರ ಯುವತಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿ, ನನ್ನ ವಿರುದ್ಧ ಸುಳ್ಳು ಹನಿಟ್ರ್ಯಾಪ್ ಪ್ರಕರಣ ದಾಖಲಿಸಿ, ವಶಕ್ಕೆ ಪಡೆದಿದ್ದಾಗ ವಿವಸ್ತ್ರಗೊಳಿಸಿ ಅಂಗಾಂಗ ಸ್ಪರ್ಶಿಸಿದ್ದರು ಎಂದು ಆರೋಪಿಸಿದ್ದಳು.

ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗವು, ಮಂಗಳವಾರದಿಂದ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮೂವರು ಅಧಿಕಾರಿಗಳಿಂದ ವಿಚಾರಣೆ ಆರಂಭಿಸಿದೆ. ತನ್ನ ವಿರುದ್ಧ ಸುಳ್ಳು ದೂರು ದಾಖಲಿಸಿ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರು ಎಂದು ಸಂತ್ರಸ್ತೆ ಮಂಗಳವಾರ ಹಾಜರಾಗಿ ಹೇಳಿಕೆ ನೀಡಿದ್ದಾಳೆ.

ಪ್ರಕರಣ ಸಂಬಂಧ ಇಂದು ಸೌತ್ ಪೊಲೀಸ್ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಗೋಪಾಲಕೃಷ್ಣ, ಸಬ್‍ಇನ್ಸ್‍ಪೆಕ್ಟರ್ ಜಯಪ್ರಕಾಶ್ ಹಾಗೂ ಎಎಸ್‍ಐ ಪುನೀತ್‍ರನ್ನು ವಿಚಾರಣೆ ನಡೆಸಿದ ಆಯೋಗದ ಅಧಿಕಾರಿಗಳಾದ ಎಂ.ಎಸ್. ಗಿಲ್, ಶ್ರೀವಾತ್ಸವ ಹಾಗೂ ಮೌನಿಯಾ ವಿಪುಲ್ ಅವರು ಲಿಖಿತ ಹೇಳಿಕೆ ದಾಖಲಿಸಿಕೊಂಡರು.

ಯುವತಿ ಹನಿಟ್ರ್ಯಾಪ್ ಮಾಡುವ ದಂಧೆಯಲ್ಲಿ ತೊಡಗಿದ್ದಾಳೆಂದು ಪುಟ್ಟಸ್ವಾಮಿ ಎಂಬ ವ್ಯಕ್ತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅನೈತಿಕ ದಂಧೆಗೆ ಸಹಕರಿಸದ ಕಾರಣ ಪುಟ್ಟಸ್ವಾಮಿ ಸುಳ್ಳು ಹನಿಟ್ರ್ಯಾಪ್ ದೂರು ನೀಡಿದ್ದನ್ನು ಪರಿಶೀಲಿಸದೆ ಪೊಲೀಸರು ಪ್ರಕರಣ ದಾಖಲಿಸಿ, ಹಿಂಸೆ ನೀಡಿದ್ದರೆಂದು ಆಕೆ ಆಯೋಗಕ್ಕೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »