ಕನ್ನಡ ಸಾಹಿತ್ಯ ಪರಿಷತ್‍ನ ಭ್ರಷ್ಟಾಚಾರ  ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಕನ್ನಡ ಸಾಹಿತ್ಯ ಪರಿಷತ್‍ನ ಭ್ರಷ್ಟಾಚಾರ  ತನಿಖೆಗೆ ಆಗ್ರಹಿಸಿ ಪ್ರತಿಭಟನೆ

July 19, 2018

ಮೈಸೂರು:  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸಮಸ್ತ ಕನ್ನಡಿಗರ ಮಾತೃಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಇತ್ತೀಚೆಗೆ ರಾಜಕೀಯ ಹಾಗೂ ಸ್ವಜನಪಕ್ಷಪಾತಕ್ಕೆ ಹೆಸರಾಗುತ್ತಿದೆ. ರಾಜ್ಯಾಧ್ಯಕ್ಷರು ಸಾರ್ವಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಏಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದ ಅನುದಾನದಲ್ಲಿ ಕೇವಲ ಸಮ್ಮೇಳನಗಳು, ಕವಿಗೋಷ್ಠಿ, ಪುಸ್ತಕ ಮೇಳಗಳನ್ನು ನಡೆಸುವುದೇ ತನ್ನ ಜವಾಬ್ದಾರಿ ಎಂದುಕೊಂಡಿರುವ ಅಧ್ಯಕ್ಷರು, ಕಸಾಪದಲ್ಲಿರುವ ಸರ್ಕಾರದ ಅನುದಾನಕ್ಕೆ ಸಂಬಂಧಿಸಿದಂತೆ ಲೆಕ್ಕವನ್ನು ಸೂಕ್ತವಾಗಿ ನಿರ್ವಹಣೆ ಮಾಡಿಲ್ಲ. ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು-ವೆಚ್ಚದ ಬಗ್ಗೆ ತಿಂಗಳಲ್ಲಿ ಲೆಕ್ಕ ನೀಡುವ ಭರವಸೆ ನೀಡಿ ವರ್ಷವಾದರೂ ಮೌನಕ್ಕೆ ಶರಣಾಗಿದ್ದಾರೆ ಎಂದು ಆಪಾದಿಸಿದರು.

ಸರ್ಕಾರ ಕಸಾಪಗೆ ಸೂಕ್ತ ಆಡಳಿತಾಧಿಕಾರಿ ನೇಮಿಸಿ ಮತ್ತಷ್ಟು ಅಧೋಗತಿಗೆ ತಪುವುದಕ್ಕೆ ಕಡಿವಾಣ ಹಾಕಬೇಕು. ಜೊತೆಗೆ ಕಸಾಪದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳದಿಂದ ತನಿಖೆ ಕೈಗೊಳ್ಳಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಕಾರ್ಯಕರ್ತರಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಗೋಪಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »