ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಾರದರ್ಶಕ ಕೆಲಸ
ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಾರದರ್ಶಕ ಕೆಲಸ

July 11, 2018

ಮದ್ದೂರು: ಕನ್ನಡ ಸಾಹಿತ್ಯ ಪರಿಷತ್ತು ಪಾರದರ್ಶಕವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್ ತಿಳಿಸಿದರು.

ಸೋಮನಹಳ್ಳಿಯ ಎಸ್.ಸಿ.ಮಲ್ಲಯ್ಯ ಪದವಿಪೂರ್ವ ಕಾಲೇಜು ಆವರಣದಲ್ಲಿ ಶ್ರೀಮತಿ ತಾಯಮ್ಮ ಮತ್ತು ಶ್ರೀ ಎಸ್.ಸಿ. ಮಲ್ಲಯ್ಯ ರಾಜ್ಯ ಮಟ್ಟದ ಜಾನಪದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಭಾವಂತ ಕನ್ನಡಿಗರನ್ನು ಗುರ್ತಿಸಿ ಅವರ ಕಲೆ ಅನಾವರಣಗೊಳ್ಳಲು ಪ್ರೋತ್ಸಾಹ ನೀಡುವುದು ಮತ್ತು ಪುರಸ್ಕಾರ ನೀಡುವ ಕೆಲಸವನ್ನು ನಿರಂತರವಾಗಿ ಮಾಡಿ ಕೊಂಡು ಬರುತ್ತಿದೆ ಎಂದರು.

ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು, ಕಠಿಣ ಪರಿಶ್ರಮದಿಂದ ಓದುವ ಮೂಲಕ ಉನ್ನತ ಹುದ್ದೆಗಳನ್ನು ಪಡೆಯಬಹುದು. ಕನ್ನಡ ಮಾಧ್ಯಮದಲ್ಲಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಬಹಳಷ್ಟು ಮಂದಿ ಇದ್ದಾರೆ. ಇಂತಹವರನ್ನು ಆದರ್ಶವಾಗಿಟ್ಟುಕೊಳ್ಳ ಬೇಕು. ಕನ್ನಡ ಭಾಷೆ ಬಗ್ಗೆ ಗೌರವ ಹೊಂದ ಬೇಕು ಎಂದರು.

ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಸಹೋದರ ಎಸ್.ಎಂ.ಶಂಕರ್ ತಮ್ಮ ತಂದೆ ತಾಯಿ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂತೋಷದ ವಿಚಾರ. ಇದಕ್ಕೆ ಕಸಾಪ ಕೂಡ ಕೈ ಜೋಡಿಸುತ್ತದೆ ಎಂದರು.

ಇದೇ ಸಂದರ್ಭ ಸವಿತಾ, ಬಸವಪ್ರಭು ಎಲ್ಲಪ್ಪ ಕುಂಡ್ರೂಕ್, ಶಿವನಗೌಡ ಎಂ.ಕೋಟಿ, ಶಂಕರಪ್ಪ ರಾಮಪ್ಪ ಸಂಕರಣ್ಣ, ಕೆ.ಎಲ್.ಪುಟ್ಟ ಸ್ವಾಮಿ, ಎಲವ್ವ ಬಸಪ್ಪ ಮಾದರ ಅವರಿಗೆ ತಾಯಮ್ಮ ಮತ್ತು ಎಸ್.ಸಿ.ಮಲ್ಲಯ್ಯ ರಾಜ್ಯ ಮಟ್ಟದ ಜಾನಪದ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ರವಿಕುಮಾರ್, ರಾಮ ನಗರ ಜಿಲ್ಲಾಧ್ಯಕ್ಷ ನಾಗರಾಜು, ತಾಲೂಕು ಅಧ್ಯಕ್ಷ ಪಣ್ಣೆದೊಡ್ಡಿ ವಿ.ಹರ್ಷ, ಸಹಾಯಕ ಪ್ರಾಧ್ಯಾಪಕಿ ಕೆಂಪಮ್ಮ, ಸಂಸ್ಥೆಯ ಅಧ್ಯಕ್ಷ ಪ್ರೊ.ಶಿವಣ್ಣ, ಆಡಳಿತ ಮಂಡಳಿ ನಿರ್ದೇಶಕ ನರೇಂದ್ರ, ಪ್ರಾಂಶುಪಾಲ ರಮೇಶ್, ಶಿವರಾಮು, ಸುಮರಾಣ , ಮುಖ್ಯ ಶಿಕ್ಷಕ ಈರಯ್ಯ ಸೇರಿದಂತೆ ಇನ್ನಿತರರಿದ್ದರು.

Translate »