ಅಸಹಾಯಕ ಮಹಿಳೆಗೆ ದೊರೆತ ಅಡುಗೆ ಕೆಲಸ
ಮಂಡ್ಯ

ಅಸಹಾಯಕ ಮಹಿಳೆಗೆ ದೊರೆತ ಅಡುಗೆ ಕೆಲಸ

July 11, 2018

ಮೇಲುಕೋಟೆ: ಸಚಿವರ ಮಾನವೀಯ ಸ್ಪಂದನೆಯಿಂದಾಗಿ ಸಂತ್ರಸ್ತ ಮಹಿಳೆಗೆ ಮತ್ತೆ ಅಡುಗೆ ಸಹಾಯಕಿ ಕೆಲಸ ದೊರೆತು ಆಕೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಮಹಿಳೆಯ ನೋವಿಗೆ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಸ್ಪಂದಿಸಿದ ಕಾರಣ ಅಡುಗೆ ಸಹಾಯಕಿ ಹುದ್ದೆಯಿಂದ ಬಿಡುಗಡೆಯಾಗಿದ್ದ ಮೇಲುಕೋಟೆ ಜಯಲಕ್ಷ್ಮಿ ಮತ್ತೆ ಕೆಲಸ ಪಡೆದಿದ್ದಾಳೆ. ಗಂಡನನ್ನು ಕಳೆದುಕೊಂಡು ಪೋಲೀಯೋ ಪೀಡಿತನಾಗಿ ಹಾಸಿಗೆ ಹಿಡಿದಿರುವ ಮಗನನ್ನು ಸಾಕುವ ಜವಾಬ್ದಾರಿ ಹೊತ್ತಿರುವ ಜಯಲಕ್ಷ್ಮಿ ಮೇಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ವಿದ್ಯಾರ್ಥಿಗಳ ಕೊರತೆ ಹಿನ್ನೆಲೆಯಲ್ಲಿ ಜಯಲಕ್ಷ್ಮಿಯನ್ನು ಕೆಲಸದಿಂದ ಮುಖ್ಯಶಿಕ್ಷಕರು ವಿಮುಕ್ತಿಗೊಳಿಸಿದ್ದರು.

ಆದರೆ ಪಾಂಡವಪುರದಲ್ಲಿ ನಡೆದ ಜನಸಂಪರ್ಕ ಸಭೆಗೆ ಆಗಮಿಸಿದ್ದ ಮಹಿಳೆಗೆ ಸಾಂತ್ವನ ಹೇಳಿದ ಸಚಿವ ಪುಟ್ಟರಾಜು, ವಿಶೇಷ ಪ್ರಕರಣವೆಂದು ಪರಿಗಣಿಸಿ ಮತ್ತೆ ಕೆಲಸ ಕೊಡುವಂತೆ ಅಕ್ಷರ ದಾಸೋಹ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆ ನೀಡಿದ ಆದೇಶದ ಪ್ರಕಾರ ಜಯಲಕ್ಷ್ಮಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಈ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿದ ಪಾಂಡವಪುರ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಜೀರ್ ಸಚಿವರ ಸೂಚನೆಯಿಂದಾಗಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಜಯಲಕ್ಷ್ಮಿಗೆ ಆದೇಶ ನೀಡಿದ್ದು ಆಕೆ ಕರ್ತವ್ಯ ನಿರ್ವಹಿಸುತ್ತಿದ್ದಾಳೆ ಎಂದರು. ಸಚಿವರ ಕಾರ್ಯಕ್ಕೆ ಮೇಲುಕೋಟೆ ನಾಗರಿಕರು ಕೃತಜ್ಞತೆ ಸಲ್ಲಿಸಿದ್ದಾರೆ

Translate »