ಬ್ಯಾಂಕ್ ಖಾತೆ ತೆರೆದು ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ
ಮಂಡ್ಯ

ಬ್ಯಾಂಕ್ ಖಾತೆ ತೆರೆದು ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ

July 11, 2018

ಕೆ.ಆರ್.ಪೇಟೆ: ಗ್ರಾಮೀಣ ಜನತೆ ಕಡ್ಡಾಯವಾಗಿ ಬ್ಯಾಂಕ್ ಖಾತೆ ತೆರೆ ಯುವ ಮೂಲಕ ಬ್ಯಾಂಕ್‍ನಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಆರ್ಥಿಕ ವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೊಸಹೊಳಲು ವಿಜಯಾಬ್ಯಾಂಕ್ ಶಾಖೆ ವ್ಯವಸ್ಥಾಪಕ ಗೌರವ್ ಅಗರ್‍ವಾಲ್ ಸಲಹೆ ನೀಡಿದರು.

ತಾಲೂಕಿನ ನಾರ್ಗೋನಹಳ್ಳಿಯಲ್ಲಿ ವಿಜಯಾಬ್ಯಾಂಕ್ ಹೊಸಹೊಳಲು ಶಾಖೆ ಹಾಗೂ ಆರ್ಥಿಕ ಸಾಕ್ಷರತಾ ಯೋಜನೆ ಯಡಿ ಹಮ್ಮಿಕೊಂಡಿದ್ದ ಬ್ಯಾಂಕ್ ಸೌಲಭ್ಯ ಗಳ ಕುರಿತಾದ ಜನಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಶೂನ್ಯ ಬ್ಯಾಲೆನ್ಸ್‍ನಲ್ಲಿ ಜನಧನ್ ಖಾತೆ ತೆರೆಯುವ ಅವಕಾಶವನ್ನು ಗ್ರಾಮೀಣ ಜನರಿಗೆ ನೀಡಿದೆ. ಜನಧನ್ ಖಾತೆ ಮೂಲಕ ವಾರ್ಷಿಕ 330ರೂ.ಗಳನ್ನು ನೀಡಿದರೆ 2ಲಕ್ಷ ರೂ.ಗಳ ಉಚಿತ ವಿಮಾ ಸೌಲಭ್ಯ ನೀಡಲಾಗುತ್ತಿದೆ. ಅಲ್ಲದೆ ವಾರ್ಷಿಕ ಕೇವಲ 12ರೂ. ನೀಡಿದರೆ ಉಚಿತವಾಗಿ 2ಲಕ್ಷ ರೂ.ಗಳ ಅಪಘಾತ ವಿಮಾ ಸೌಲಭ್ಯ ನೀಡಲಾಗುತ್ತಿದೆ. ಈ ಸೌಲಭ್ಯಗಳನ್ನು ಎಲ್ಲಾ ಖಾತೆದಾರರು ಪಡೆದುಕೊಳ್ಳಬಹುದಾಗಿದೆ. 18ರಿಂದ 40ವರ್ಷ ಒಳಪಟ್ಟ ವರು ಅಟಲ್ ಪೆನ್ಷನ್ ಯೋಜನೆಯಡಿ ಪ್ರತಿ ತಿಂಗಳು ಕೇವಲ 500ರಿಂದ 900ರೂ. ಕಟ್ಟಿದರೆ 60ವರ್ಷ ತುಂಬಿದ ಬಳಿಕ ಮಾಸಿಕ 10ಸಾವಿರ ರೂ. ಪೆನ್ಷನ್ ನೀಡಲಾಗುತ್ತದೆ. ಹಾಗಾಗಿ ಗ್ರಾಮೀಣ ಜನರು ಕಡ್ಡಾಯವಾಗಿ ಬ್ಯಾಂಕ್ ಖಾತೆ ತೆರೆದು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಆರ್ಥಿಕ ಸಾಕ್ಷರತಾ ಯೋಜನೆ ಜಿಲ್ಲಾ ಸಂಯೋಜಕ ಯೋಗೇಶ್, ತಾಲೂಕು ಆರ್ಥಿಕ ಸಾಕ್ಷರತಾ ಯೋಜನೆ ಮುಖ್ಯಸ್ಥ(ಎಫ್‍ಎಲ್‍ಸಿ) ಡಿ.ವಿ.ನಾಗರಾಜು, ಬ್ಯಾಂಕ್ ಮಿತ್ರ ಯೋಜನೆ ತಾಲೂಕು ಸಂಚಾಲಕ ಸಿ.ಮೂರ್ತಿ, ಡಿಸಿಸಿ ಬ್ಯಾಂಕ್ ಹೊಸಹೊಳಲು ಶಾಖೆಯ ವ್ಯವಸ್ಥಾಪಕ ಮಹೇಶ್, ಗ್ರಾಪಂ ಸದಸ್ಯರಾದ ಚನ್ನಕೇಶವ, ನಾಗರಾಜು, ಜಯಲಕ್ಷ್ಮೀ, ಲೋಕೇಶ್, ಅಂಗನವಾಡಿ ಶಿಕ್ಷಕಿ ಶಿವಮ್ಮ, ಗೃಹ ರಕ್ಷಕ ದಳದ ಸಾಯಿಕುಮಾರ್, ಬ್ಯಾಂಕ್ ಮಿತ್ರರಾದ ಪಾಪೇಗೌಡ, ಶ್ವೇತಾ, ನವೀನ್‍ಕುಮಾರ್, ಕಾರ್ತಿಕ್, ರಾಕೇಶ್ ಮತ್ತಿತರರಿದ್ದರು.

Translate »