ಅನಧಿಕೃತವಾಗಿ ಸಂಚರಿಸುತ್ತಿದ್ದ ಸಚಿವ ಜಮೀರ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಬಸ್ ಪೊಲೀಸರ ವಶಕ್ಕೆ
ಮಂಡ್ಯ, ಮೈಸೂರು

ಅನಧಿಕೃತವಾಗಿ ಸಂಚರಿಸುತ್ತಿದ್ದ ಸಚಿವ ಜಮೀರ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಬಸ್ ಪೊಲೀಸರ ವಶಕ್ಕೆ

November 28, 2018

ಕೆ.ಆರ್.ಪೇಟೆ: ಪರವಾನಗಿ ಇಲ್ಲದೆ ಅನಧಿಕೃತವಾಗಿ ಕೆ.ಆರ್.ಪೇಟೆಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಸಚಿವ ಜಮೀರ್ ಅಹಮದ್ ಅವರಿಗೆ ಸೇರಿದ ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆಯ ಬಸ್ಸನ್ನು ಸಾರ್ವಜನಿಕರೇ ತಡೆದು ಕೆ.ಆರ್.ಪೇಟೆ ಪಟ್ಟಣ ಪೊಲೀಸರಿಗೆ ಮಂಗಳವಾರ ಒಪ್ಪಿಸಿದ್ದಾರೆ.

ರಾಜ್ಯದ ಪ್ರಭಾವಿ ಸಚಿವರಾಗಿರುವ ಜಮೀರ್ ಅಹಮದ್ ಒಡೆತನದ ನ್ಯಾಷ ನಲ್ ಟ್ರಾವೆಲ್ಸ್ ಸಂಸ್ಥೆಯ ಆರಕ್ಕೂ ಹೆಚ್ಚು ಬಸ್ಸುಗಳು ಪ್ರತಿನಿತ್ಯ ಪಟ್ಟಣದಿಂದ ನಾಗಮಂಗಲ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಕರನ್ನು
ಕರೆದೊಯ್ಯುತ್ತಿವೆ.

ಇತ್ತೀಚೆಗೆ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ರಾಜಕುಮಾರ ಖಾಸಗಿ ಬಸ್ಸು ನಾಲೆಗೆ ಉರುಳಿ ಬಿದ್ದು 30 ಮಂದಿ ಅಮಾಯಕ ಪ್ರಯಾಣಿಕರನ್ನು ಬಲಿ ತೆಗೆದುಕೊಂಡ ನಂತರ ಎಚ್ಚೆತ್ತುಕೊಂಡಿದ್ದ ಸಾರಿಗೆ ಅಧಿಕಾರಿಗಳು ಮತ್ತು ಪೊಲೀಸರು, ಪರ್ಮಿಟ್ ಮತ್ತು ಮಾರ್ಗ ರಹದಾರಿಯನ್ನು ಹೊಂದಿರದ ಬಸ್ಸುಗಳ ಸಂಚಾರವನ್ನು ನಿರ್ಬಂಧಿಸಿದ್ದರು. ಕಳೆದ ಎರಡು ಮೂರು ದಿನದಿಂದ ಬಂದ್ ಆಗಿದ್ದ ಅನಧಿಕೃತ ಬಸ್ಸುಗಳ ಸಂಚಾರ ಇಂದು ಮತ್ತೆ ಆರಂಭವಾಗಿತ್ತು.

ಪಟ್ಟಣದ ಆಸರೆ ಸಮಾಜಸೇವಾ ಟ್ರಸ್ಟಿನ ಅಧ್ಯಕ್ಷ ಹೆಚ್.ಬಿ.ಮಂಜುನಾಥ್ ಮತ್ತು ಸ್ನೇಹಿತರು, ನ್ಯಾಷನಲ್ ಟ್ರಾವೆಲ್ಸ್‍ಗೆ ಸೇರಿದ ಬಸ್ಸನ್ನು ತಡೆದು ಪೊಲೀಸರಿಗೆ ಒಪ್ಪಿಸಿದರು. ಸಬ್‍ಇನ್ಸ್‍ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ನ್ಯಾಷನಲ್ ಟ್ರಾವೆಲ್ಸ್‍ನ ಬಸ್ಸನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಬಸ್ಸಿನ ಚಾಲಕ ಶಿವೇಗೌಡ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಾರ್ಗ ರಹದಾರಿಯಿಲ್ಲದ ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆಯ ಬಸ್ಸನ್ನು ಪಟ್ಟಣ ಪೊಲೀಸರು ವಶಕ್ಕೆ ತೆಗೆದುಕೊಂಡ ಸುದ್ದಿ ತಿಳಿದು ನಾಗಮಂಗಲದ ಸಾರಿಗೆ ಅಧಿಕಾರಿ ಸತೀಶ್, ಪೊಲೀಸರ ವಶದಲ್ಲಿದ್ದ ಬಸ್ಸನ್ನು ಪರಿಶೀಲಿಸಿ ಸಾರಿಗೆ ಇಲಾಖೆ ವತಿಯಿಂದಲೂ ಪ್ರಕರಣ ದಾಖಲಿಸಿ, ಬಸ್ಸಿನ ಮಾಲೀಕರಿಗೆ ನೋಟೀಸ್ ಜಾರಿ ಮಾಡುವುದಾಗಿ ತಿಳಿಸಿದರು.

Translate »