ರೋಗಗಳಿಂದ ನರಳುತ್ತಿರುವ ಚಿಕ್ಕೋನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು
ಮಂಡ್ಯ, ಮೈಸೂರು

ರೋಗಗಳಿಂದ ನರಳುತ್ತಿರುವ ಚಿಕ್ಕೋನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು

November 28, 2018

ಮಂಡ್ಯ: ಮದ್ದೂರು ತಾಲೂಕಿನ ಕೊಪ್ಪದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಸ್ಪೆಂಟ್‍ವಾಷ್ ಮೇಜರ್ ಟ್ಯಾಂಕ್ ವಾರದ ಹಿಂದೆ ಸ್ಫೋಟಗೊಂಡು ವಾರವೇ ಕಳೆದಿದ್ದು, ಕಾರ್ಖಾನೆ ಸುತ್ತಲಿನ ಚಿಕ್ಕೋನಹಳ್ಳಿ, ತಗ್ಗಹಳ್ಳಿ, ಅಣ್ಣೆದೊಡ್ಡಿ, ಕೀಳಘಟ್ಟ, ಯು.ಸಿ.ದೊಡ್ಡಿ, ಗೊಲ್ಲರದೊಡ್ಡಿ ಸೇರಿದಂತೆ 17 ಗ್ರಾಮಗಳ ಜನರು ವಿವಿಧ ರೋಗಗಳಿಂದ ನರಳುತ್ತಿದ್ದಾರೆ.

ಚಿಕ್ಕೋನಹಳ್ಳಿ ಗ್ರಾಮವೊಂದರಲ್ಲೇ 500ಕ್ಕೂ ಹೆಚ್ಚು ಜನರಿಗೆ ಸೊಂಟ ನೋವು, ಕೆಮ್ಮು, ನೆಗಡಿ, ತುರಿಕೆ, ಗಂಟಲು ಕೆರೆತ, ಚರ್ಮ ರೋಗಗಳು, ಶ್ವಾಸಕೋಶದ ಸಮಸ್ಯೆ ಬಾಧಿಸುತ್ತಿದೆ.

ಟ್ಯಾಂಕ್ ಸ್ಫೋಟದಿಂದ 82 ಲಕ್ಷ ಲೀಟರ್‍ಗೂ ಅಧಿಕ ರಾಸಾಯನಿಕ ದ್ರಾವಣ ಹರಿದುಹೋಗಿ ಸುತ್ತಲಿನ 50 ಎಕರೆ ಗದ್ದೆಗಳನ್ನು ಸೇರಿದೆ. ಪಕ್ಕದ ಶಿಂಷಾ ನದಿಗೂ ಈ ವಿಷಕಾರಿ ದ್ರವತ್ಯಾಜ್ಯ ಸೇರಿದ್ದು, ನೀರು ವಿಷಮಯ ವಾಗಿದೆ. ನೀರನ್ನು ಮುಟ್ಟಿದ ಕೆಲವು ರೈತರಿಗೆ ಕೈ ಮತ್ತು ಕಾಲು, ತೊಡೆಗಳಲ್ಲಿ `ಗಂದೆ’ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಬೋರ್‍ವೆಲ್‍ಗಳಲ್ಲಿನ ನೀರು ಕೂಡ ಸ್ಪೆಂಟ್‍ವಾಷ್ ನೀರಿನಂತೆಯೇ ಕಪ್ಪಾಗಿ ಹೊರ ಬರುತ್ತಿದೆ. ಅಲ್ಲದೇ, ಹಲವು ಗ್ರಾಮಗಳ ಹಳ್ಳಗಳು, ಕೆರೆ-ಕಟ್ಟೆ, ಗುಂಡಿಗಳನ್ನೂ ಸೇರಿರುವ ಈ ರಾಸಾ ಯನಿಕದಿಂದ ಸಹಿಸಲಾಗದಂತಹ ದುರ್ವಾಸನೆ ಹರಡು ತ್ತಿದೆ. ಜನ ಸಹ ಮೂಗು ಮುಚ್ಚಿಕೊಂಡೇ ತಿರುಗಾಡ ಬೇಕಾದ ಸ್ಥಿತಿ ಎದುರಾಗಿದೆ. ಕಾರ್ಖಾನೆ ಆಡಳಿತ ಮಂಡಳಿ ಹಳ್ಳಗಳಲ್ಲಿ ಸಂಗ್ರಹವಾಗಿರುವ ದ್ರಾವಣವನ್ನು ಟ್ಯಾಂಕರ್‍ಗಳಿಗೆ ತುಂಬಿಸಿ ಸಾಗಿಸುವ ಯತ್ನ ಮಾಡುತ್ತಿದ್ದರೂ, ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ.

ಅಸಮರ್ಪಕ ಚಿಕಿತ್ಸೆ: ನನಗೆ ಸೊಂಟ ನೋವು ಕಾಣಿಸಿಕೊಂಡಿದೆ. ಸ್ನೇಹಿತನಿಗೆ ವಾಂತಿ-ಭೇದಿ ಆಗಿದೆ. ಕೆಲವರಿಗೆ ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಚಿಕ್ಕೋನಹಳ್ಳಿಯಲ್ಲಿ ತೆರೆದಿರುವ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರು ಚಿಕಿತ್ಸೆ ನೀಡಿದರೂ, ಗುಣಮಟ್ಟದ ಔಷಧಿ ನೀಡುತ್ತಿಲ್ಲ ಎಂದು ರೈತ ಸಿ.ಕೆ. ರಮೇಶ್ ಆರೋಪಿಸಿದರು.

ಕೆಮ್ಮು-ನೆಗಡಿ ಬಾಧಿತ ಮಗುವಿಗೆ ಚಿಕಿತ್ಸೆ.

ಬೆಳೆಹಾನಿ: ಚಿಕ್ಕೋನಹಳ್ಳಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ತಮಗಿಷ್ಟ ಬಂದ ರೀತಿಯಲ್ಲಿ ಬೆಳೆ ಸರ್ವೆ ಮಾಡಿದ್ದಾರೆ. ತೆಂಗಿನಮರ, ಅಡಕೆ ಮರ, ನೇರಲೆ ಮರ ಮತ್ತು ನಾಲೆ ಪಕ್ಕದ ಮರಗಳನ್ನು ಸರ್ವೆಯಲ್ಲಿ ಸೇರಿಸಿಯೇ ಇಲ್ಲ. ತಾರತಮ್ಯ ಮಾಡುತ್ತಿದ್ದಾರೆ. ಇದರಿಂದ ಹಲವಾರು ರೈತರಿಗೆ ಅನ್ಯಾಯವಾಗಿದೆ ಎಂದು ಗ್ರಾಮದ ಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯಿಂದ ಗ್ರಾಮದ ಬೋರ್‍ವೆಲ್ ನೀರು ಕಲುಷಿತಗೊಂಡಿದೆ. ಕೊಳವೆಬಾವಿ ನೀರು ಸ್ಪೆಂಟ್ ವಾಷ್ ದ್ರಾವಣದಂತೆಯೇ ಕಪ್ಪಾಗಿ ಹೊರ ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಸ್ಪಂದಿಸುತ್ತಿಲ್ಲ. ಚಿಕ್ಕೋನಹಳ್ಳಿ ಮತ್ತು ಸುತ್ತಲ ಗಾಮಗಳಲ್ಲಿ ಕಬ್ಬು, ಭತ್ತ, ರಾಗಿ ಮತ್ತಿತರ ಬೆಳೆಗಳು, ತೆಂಗಿನ ಮರಗಳು ಒಣಗಿ ಹೋಗುತ್ತಿವೆÉ. ಕೆರೆ ಕಟ್ಟೆಯಲ್ಲಿನÀ ಮೀನುಗಳೂ ಸಾಯುತ್ತಿವೆ. ರೈತರಿಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಹಾಗಾಗಿ, ಪ್ರಾಮಾಣಿಕವಾಗಿ ಬೆಳೆ ಸರ್ವೆ ಕಾರ್ಯ ಮಾಡಿ ವೈಜ್ಞಾನಿಕ ರೀತಿ ಪರಿಹಾರ ನೀಡಬೇಕು ಎಂದು ರೈತ ಶಿವಲಿಂಗಯ್ಯ ಆಗ್ರಹಿಸಿದ್ದಾರೆ.

ಗ್ರಾಮದ ಹಳ್ಳದಲ್ಲಿರುವ ಸ್ಟಂಟ್ ವಾಷ್ ರಾಸಾಯನಿಕ ದ್ರಾವಣವನ್ನು ಕಾರ್ಖಾನೆಯ ಟ್ಯಾಂಕರ್ ಮೂಲಕ ಸಾಗಿಸುತ್ತಿರುವುದು.

ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕಾರ್ಖಾನೆ ಆರಂಭಿಸುವಾಗ ಪರಿಸರಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದಿತ್ತು. ಈಗ ಬಯೋಕಾಂಪೋಸ್ಟ್ ಘಟಕ ತೆರೆದು ಸುತ್ತಲ ಪರಿಸರ ಹಾಳು ಮಾಡಿದೆ. ಈ ಬಗ್ಗೆ ಪರಿಸರ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. 2017ರಲ್ಲಿಯೂ ಈಗಿನಂತೆಯೇ ದುರಂತ ಸಂಭವಿಸಿತ್ತು. ಆಗ ಅಧಿಕಾರಿಗಳು ಮತ್ತು ಕಾರ್ಖಾನೆ ಆಡಳಿತ ಮಂಡಳಿ ಶಾಮೀಲಾಗಿ ಪ್ರಕರಣ ಮುಚ್ಚಿ ಹಾಕಿದ್ದರು. ಈಗ ಮತ್ತೆ ಬಾಯ್ಲರ್ ಸ್ಫೋಟವಾಗಿದೆ. ಹಿಂದಿನ ಘಟನೆ ವೇಳೆಯೇ ಕಠಿಣ ಕ್ರಮ ಕೈಗೊಂಡಿದ್ದರೆ ಈಗ ಅನಾಹುತವಾಗುತ್ತಿರಲಿಲ್ಲ ಎಂದು ಅಣ್ಣೆದೊಡ್ಡಿ ಯುವ ಮುಖಂಡ ನಂದೀಶ್ ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳು ಈ ಬಾರಿಯಾದರೂ ಸಮರ್ಪಕ ರೀತಿ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ರೈತರ ಸ್ಥಿತಿ ಇನ್ನೂ ಶೋಚನೀಯವಾಗಲಿದೆ ಎಂದು ಅವರು ಆತಂಕ ಹೊರಹಾಕಿದ್ದಾರೆ.

ಚಿಕ್ಕೋನಹಳ್ಳಿಯಲ್ಲಿ ಸ್ಪೆಂಟ್ ವಾಷ್ ವಾಟರ್ ಹಾಗೂ ಅದರ ವಾಸನೆಯಿಂದ ಜನರಿಗೆ ಯಾವುದೇ ರೀತಿಯ ದುಷ್ಪರಿಣಾಮ ಬೀರಿರುವ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಸರ್ವೆ ಕಾರ್ಯಕ್ಕೆ 5 ತಂಡಗಳನ್ನು ರಚಿಸಿದ್ದು, 4 ತಂಡಗಳು ಈಗಾಗಲೇ ವರದಿ ನೀಡಿವೆ. ಚಿಕ್ಕೋನಹಳ್ಳಿಯಲ್ಲಿ ಹೆಚ್ಚು ಬೆಳೆ ನಾಶವಾಗಿರುವುದರಿಂದ ಹಾಗೂ ಸರ್ವೆಗೆ ಅಗತ್ಯವಾದ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ-ಐಎಫ್‍ಎಸ್‍ಸಿ ನಂಬರ್ ತೆಗೆದುಕೊಳ್ಳಲು ತಡವಾಗಿದೆ. ಇದರ ಹೊರತು ಸರ್ವೆಯಲ್ಲಿ ಯಾವುದೇ ಲೋಪವಾಗಿಲ್ಲ. ಜಿಲ್ಲಾಧಿಕಾರಿಗಳಿಗೆ ಬುಧವಾರ ವರದಿ ಸಲ್ಲಿಸಲಾಗುವುದು. – ಶ್ವೇತಾ, ತಹಶೀಲ್ದಾರ್, ಮದ್ದೂರು

ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದೇವೆ. ಪ್ರತಿ ಮನೆಗೂ ಹೋಗಿ ಜನರಿಂದ ಮಾಹಿತಿ ಪಡೆಯುತ್ತಿದ್ದೇವೆ. ಸ್ಥಳೀಯ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ನಿತ್ಯವೂ 10-20 ಮಂದಿಗೆ ನೆಗಡಿ, ಕೆಮ್ಮು, ಸೊಂಟ ನೋವು, ಅಲರ್ಜಿಯಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. – ಧರ್ಮೇಂದ್ರ, ಎನ್‍ಎಸ್‍ಎಲ್ ಕಾರ್ಖಾನೆ ಆರೋಗ್ಯಾಧಿಕಾರಿ

Translate »