ಪಕ್ಷಿಗಳು, ಪರಿಸರವೆಂದರೆ ಈ ಪೋರಿಗೆ ಪಂಚಪ್ರಾಣ
ಮೈಸೂರು

ಪಕ್ಷಿಗಳು, ಪರಿಸರವೆಂದರೆ ಈ ಪೋರಿಗೆ ಪಂಚಪ್ರಾಣ

November 28, 2018

ಮೈಸೂರು:  ಹಕ್ಕಿಗಳ ಆರೈಕೆಯೇ ಈ ಪುಟಾಣಿಗೆ ಆನಂದ! ಹಕ್ಕಿಗಳೆಂದರೆ ಈಕೆಗೆ ಅಕ್ಕರೆ, ಪರಿಸರವೆಂದರೆ ಕಾಳಜಿ. ಹೌದು, 11 ವರ್ಷ ಆ ಬಾಲಕಿಗೆ ಪಕ್ಷಿಗಳ ಬಗ್ಗೆ ಅತೀವ ಪ್ರೀತಿ. ಅವುಗಳಿಗೆ ಕಾಳು-ಕಡ್ಡಿ ನೀಡಲು ಫುಡ್ ಕಪ್ಸ್, ನೀರುಣಿಸಲು ವಾಟರ್ ಕಪ್ಸ್ ಸಿದ್ಧಪಡಿಸುವ ಕಾಯಕದಲ್ಲಿ ನಿರತಳಾಗಿದ್ದಾಳೆ ಈ ಪೋರಿ.

ಮೈಸೂರಿನ ಜೆಪಿ ನಗರದ ನಿವಾಸಿ ಎಸ್.ವರ್ಷಿಣಿ ಎಂಬ 7ನೇ ತರಗತಿ ಬಾಲಕಿ ತನ್ನದೇ ಪ್ರಪಂಚದಲ್ಲಿ ಪಕ್ಷಿ ಸಂಕುಲಕ್ಕೆ ಆಸರೆಯಾಗಿದ್ದಾಳೆ. ಈಕೆ ತನ್ನ ಮನೆಯ ಆಸುಪಾಸು ಹಾಗೂ ಚಾಮುಂಡಿಬೆಟ್ಟದಲ್ಲಿ ಪಕ್ಷಿಗಳು ಸೇರುವ ಸ್ಥಳಗಳಲ್ಲಿ ಫುಡ್ ಕಪ್ಸ್ ಹಾಗೂ ವಾಟರ್ ಕಪ್ಸ್‍ಗಳನ್ನು ಇಟ್ಟು ಪೋಷಿಸುತ್ತಾಳೆ. ಅಷ್ಟು ಮಾತ್ರವಲ್ಲದೆ, ವಿವಿಧ ಜಾತಿಯ ಪಕ್ಷಿಗಳ ಅಧ್ಯಯನ ಇವಳ ಕಾಳಜಿಯ ವಿಷಯ.

ಷಡಕ್ಷರಸ್ವಾಮಿ ಹಾಗೂ ಲಾವಣ್ಯ ದಂಪತಿ ಪುತ್ರಿಯಾದ ಎಸ್.ವರ್ಷಿಣಿಗೆ ಹಕ್ಕಿಗಳೆಂದರೆ ಎಲ್ಲಿಲ್ಲದ ಅಕ್ಕರೆ. ತಂದೆಯ ನೆರವಿನಿಂದ ಹಕ್ಕಿಗಳಿಗೆ ಬೇಕಾದ ಕಾಳು ಗಳನ್ನು ಖರೀದಿಸಿ ತಾನು ಅಳವಡಿಸಿರುವ ಫುಡ್ ಕಪ್ಸ್‍ಗಳಿಗೆ ಹಾಕುವ ಕಾಯಕ ಈಕೆಯದು. ಸೆಂಟ್ ಥಾಮಸ್ ಸೆಂಟ್ರಲ್ ಸ್ಕೂಲ್‍ನ ವಿದ್ಯಾರ್ಥಿನಿಯಾದ ಈ ಪುಟಾಣಿ, ಪಕ್ಷಿಗಳ ಬಗ್ಗೆ ತನ್ನ ಸಹಪಾಠಿಗಳಿಗೂ ಒಲವು ಮೂಡಿಸುತ್ತಿದ್ದಾಳೆ. ಇದಕ್ಕಾಗಿ ಶಾಲೆಯ ರಜೆಯ ದಿನಗಳಂದು `ಪಕ್ಷಿ ವೀಕ್ಷಣೆ’ ಕಾರ್ಯಕ್ರಮ ಸಂಘಟಿಸಿ ತನ್ನ ಸ್ನೇಹ ಬಳಗಕ್ಕೂ ಪಕ್ಷಿ ಪ್ರಪಂಚದ ವೈಶಿಷ್ಟ್ಯ ಪರಿಚಯಿಸುತ್ತಾಳೆ.

ಶಾಲಾ ಕಾಲೇಜು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಕ್ಷಿ ಮತ್ತು ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡುವ ಲ್ಲಿಯೂ ವರ್ಷಿಣಿ ಕೌಶಲ್ಯ ಮೆರೆದಿದ್ದಾಳೆ. ಸುಮಾರು 30ಕ್ಕೂ ಹೆಚ್ಚು ಮಕ್ಕಳನ್ನು ಒಗ್ಗೂ ಡಿಸಿ, `ಗ್ರೀನ್ ವಾರಿಯರ್ಸ್ ಮೈಸೂರು’ ತಂಡ ಕಟ್ಟಿದ ಕೀರ್ತಿಯೂ ಇವಳಿಗೆ ಸಲ್ಲುತ್ತದೆ. ಈ ತಂಡ ಕಳೆದ ಎರಡು ವರ್ಷಗಳಿಂದ ಪಕ್ಷಿ ಸಂರಕ್ಷಣೆ, ಗಿಡಗಳನ್ನು ನೆಟ್ಟು ಪೋಷಿ ಸುವುದು, ರಸ್ತೆ ಬದಿಯ ಮರಗಳ ದುರ್ಬಳಕೆ ತಡೆಯಲು ಜಾಗೃತಿ ಮೂಡಿಸುವುದನ್ನು ತನ್ನ ಕೈಮೀರಿ ಮಾಡುತ್ತಿದೆ.

ಕಾಗದದ ಬ್ಯಾಗ್: ಪ್ಲಾಸ್ಟಿಕ್ ಬ್ಯಾಗ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿದ್ದು ಮಾತ್ರವಲ್ಲದೆ, ಕಾಗದದ ಬ್ಯಾಗ್‍ಗಳನ್ನು ತಯಾರಿಸಿ ಉಚಿತವಾಗಿ ವಿತರಿಸಿದೆ ಎಸ್. ವರ್ಷಿಣಿ ನೇತೃತ್ವದ ತಂಡ. ಇದೇ ದಸರಾ ರಜೆಯಲ್ಲಿ ಸಾವಿರಕ್ಕೂ ಹೆಚ್ಚು ಕಾಗದದ ಬ್ಯಾಗ್‍ಗಳನ್ನು ಸಿದ್ಧಪಡಿಸಿ, ತರಕಾರಿ ಮತ್ತು ಹಣ್ಣಿನ ಅಂಗಡಿಗಳು, ದಿನಸಿ ಅಂಗಡಿಗಳು, ತಳ್ಳುವ ಗಾಡಿಗಳು, ಬೇಕರಿಗಳಿಗೆ ಭೇಟಿ ನೀಡಿ, ಉಚಿತವಾಗಿ ನೀಡುವ ಮೂಲಕ ಪರಿಸರ ಕಳಕಳಿ ಮೆರೆದಿದೆ ಈ ತಂಡ.
ಇದೇ ಮೇ ತಿಂಗಳಿನಲ್ಲಿ ಗ್ರೀನ್ ವಾರಿಯರ್ಸ್ ತಂಡ, ಸಂಘಟನೆಯೊಂದರ ಸಹಯೋಗದೊಂದಿಗೆ ಬೀಜದುಂಡೆಗಳನ್ನು ತಯಾರಿಸಿ, ಅವುಗಳನ್ನು ಒಣಗಿಸಿ, ಚಾಮುಂಡಿಬೆಟ್ಟ, ವರುಣಾ ಕೆರೆ ಸುತ್ತಮುತ್ತ ನೆಟ್ಟಿದೆ. ಸ್ಥಳೀಯ ಸಸ್ಯಗಳ ಬೀಜಗಳನ್ನು ಸಂಗ್ರಹಿಸಿ, ಸಗಣಿ, ಹಸುವಿನ ಗಂಜಲ ಮತ್ತು ಕೆಮ್ಮಣ್ಣಿನ ಮಿಶ್ರಣದೊಂದಿಗೆ ಸೇರಿಸಿ ಬೀಜದುಂಡೆ ತಯಾರಿಸುವ ಕೌಶಲ್ಯವನ್ನು ವರ್ಷಿಣಿ ತಂಡ ಸಿದ್ಧಿಸಿಕೊಂಡಿದೆ.

ಪ್ಲಾಸ್ಟಿಕ್ ಬಾಟಲಿ ಸಂಗ್ರಹ: ಬಳಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದಾಳೆ ಎಸ್. ವರ್ಷಿಣಿ! ಏಕಂತೀರಾ? ಹೀಗೆ ಸಂಗ್ರಹಿಸುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹಕ್ಕಿಗಳಿಗೆ ನೀರೂಣಿಸುವ ಕಪ್ಸ್ ಹಾಗೂ ದವಸ-ದಾನ್ಯ ನೀಡುವ ಕಪ್ಸ್‍ಗಳನ್ನು ಸಿದ್ಧಪಡಿಸುತ್ತಾಳೆ ವರ್ಷಿಣಿ. ಮೈಸೂರಿನ ಚಾಮುಂಡಿಬೆಟ್ಟ ಸೇರಿದಂತೆ ತನ್ನ ಮನೆಯ ಸುತ್ತಮುತ್ತ ಪ್ಲಾಸ್ಟಿಕ್ ಬಾಟಲ್ ಸಂಗ್ರಹಿಸಿ, ಹಕ್ಕಿಗಳಿಗೆ ನೀರು, ಕಾಳು ಕಡಿ ಹಾಕಲು ಕಪ್ಸ್‍ಗಳನ್ನು ತಯಾರು ಮಾಡುತ್ತಾಳೆ. ತನ್ನ ಮನೆ ಹಾಗೂ ಶಾಲೆಯ ಸುತ್ತಮುತ್ತ ಇದುವರೆಗೂ 300ಕ್ಕೂ ಹೆಚ್ಚು ಕಪ್ಸ್‍ಗಳನ್ನು ಕಟ್ಟಿದ್ದಾಳೆ ಈ ಪೋರಿ. ಮರ, ಮನೆಯ ಮಹಡಿ ಮೇಲೆ ಕಪ್ಸ್ ಗಳನ್ನು ಇಟ್ಟು ಅವುಗಳ ನಿರ್ವಹಣೆಗೂ ಯೋಜನೆ ಅನುಷ್ಠಾನಗೊಳಿಸಿದ್ದಾಳೆ.

ತನ್ನ ಮನೆ ಹಾಗೂ ಸುತ್ತಮುತ್ತಲ ಕಪ್ಸ್‍ಗಳ ನಿರ್ವಹಣೆಯನ್ನು ತಾನೇ ಮಾಡಿ ದರೆ, ಉಳಿದವನ್ನು ಸ್ಥಳೀಯರ ಮನ ವೊಲಿಸಿ ಅವರ ಉಸ್ತುವಾರಿಗೆ ನೀಡು ವಲ್ಲಿಯೂ ಯಶಸ್ವಿಯಾಗಿದ್ದಾಳೆ. ವರ್ಷಿಣಿ ತಂದೆ ಷಡಕ್ಷರಸ್ವಾಮಿ ವೃತ್ತಿಯಲ್ಲಿ ಉಪ ನ್ಯಾಸಕರಾದರೆ ತಾಯಿ ಲಾವಣ್ಯ ಗೃಹಣಿ ಯಾಗಿದ್ದಾರೆ. ತಮ್ಮ ಮಗಳ ಈ ಪರಿಸರ ಕಾಳಜಿಗೆ ಇವರ ಪ್ರೋತ್ಸಾಹವೂ ಇದೆ. ಹೈದರಾಬಾದಿನಲ್ಲಿ ನಡೆದ ಮಿನಿ ನ್ಯಾಷ ನಲ್ ಹ್ಯಾಡ್‍ಬಾಲ್ ಚಾಂಪಿಯನ್ ಶಿಫ್‍ನಲ್ಲೂ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಎಸ್.ವರ್ಷಿಣಿ ಕ್ರೀಡೆ ಯಲ್ಲೂ ಆಸಕ್ತಿ ಹೊಂದಿದ್ದಾಳೆ.

Translate »